ಬಂಟ್ವಾಳ, ಫೆ 05 (DaijiworldNews/MS): ಬಂಟ್ವಾಳ ಮಂಡಲದ ಬಿಜೆಪಿ ಅಧ್ಯಕ್ಷ ಆಯ್ಕೆಯ ಬೆನ್ನಲ್ಲೇ ಶಾಸಕ ಸಹಿತ ಹಿರಿಯ ಕಾರ್ಯಕರ್ತರ ಅಸಮಾಧಾನ ಬಹಿರಂಗಗೊಂಡಿದೆ.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನಿವಾಸದಲ್ಲಿ ಶನಿವಾರ ಸಂಜೆ ಆಯ್ಕೆಯಲ್ಲಿ ಉಂಟಾದ ಗೊಂದಲದ ಬಗ್ಗೆ ಸಭೆಯೊಂದು ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಜಿಲ್ಲಾಧ್ಯಕ್ಷರು ಮಂಡಲದ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಶಾಸಕರ ಪಟ್ಡಿಯನ್ನು ಗಣನೆಗೆ ತೆಗೆದುಕೊಳ್ಳದೆ, ಅವರ ಇಚ್ಛೆಯಂತೆ ಆಯ್ಕೆ ಮಾಡಿದ್ದಾರೆ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.ಬಂಟ್ವಾಳ ಕ್ಷೇತ್ರದ ಅಧ್ಯಕ್ಷ ಪಟ್ಟಿಯಲ್ಲಿ ಸಂದೇಶ್ ಶೆಟ್ಟಿ ಅರೆಬೆಟ್ಟು, ರಾಮ್ ದಾಸ್ ಬಂಟ್ವಾಳ ಮತ್ತು ಸುದರ್ಶನ ಬಜ ಈ ಮೂವರ ಹೆಸರನ್ನು ಜಿಲ್ಲೆಗೆ ಕಳುಹಿಸಲಾಗಿತ್ತು.
ಆದರೆ ಜಿಲ್ಲೆಯಿಂದ ತಾಲೂಕಿಗೆ ಕಳುಹಿಸಲಾಗಿರುವ ಪಟ್ಟಿಯಲ್ಲಿ ಈ ಮೂವರ ಹೆಸರನ್ನು ಕೈ ಬಿಡಲಾಗಿತ್ತು.ಅದರ ಬದಲಿಗೆ ಪಟ್ಟಿಯಲ್ಲಿದ ಚೆನ್ನಪ್ಪ ಕೋಟ್ಯಾನ್ ಅವರನ್ನು ಅಧ್ಯಕ್ಷ ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.ಶಾಸಕರು ಕಳುಹಿಸಿದ ಹೆಸರನ್ನು ಕೈ ಬಿಟ್ಟು ಬೇರೆಯದೇ ಹೆಸರನ್ನು ಸೇರಿಸಿದ ಜಿಲ್ಲಾ ಸಮಿತಿ ಅಧ್ಯಕ್ಷರ ನಡೆ ಶಾಸಕರಿಗೆ ಅವಮಾನ ಮಾಡಿದೆ ಎಂದು ಸಭೆಯಲ್ಲಿ ಅಕ್ರೋಶ ವ್ಯಕ್ತವಾಗಿದೆ.
ಕ್ಷೇತ್ರದಲ್ಲಿ ಮೂರು ಬಾರಿ ಪಾದಯಾತ್ರೆಯ ಮೂಲಕ ಪಕ್ಷ ಸಂಘಟನೆಯನ್ನು ಮಾಡಿ ಎರಡು ಶಾಸಕರಾಗಿ ಆಯ್ಕೆಯಾದ ರಾಜೇಶ್ ನಾಯ್ಕ್ ಅವರನ್ನು ಬಿಜೆಪಿ ಜಿಲ್ಲಾ ಸಮಿತಿ ಗಣನೆಗೆ ತೆಗೆದುಕೊಳ್ಳದೆ ಅವರ ಮಾತಿಗೆ ಬೆಲೆ ಕೊಡದೆ ಅವಮಾನ ಮಾಡಿದ್ದು ಸರಿಯಲ್ಲ ಎಂಬ ಮಾತು ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಹೇಳಲಾಗಿದೆ.
ಶಾಸಕರಲ್ಲಿ ಪಟ್ಟಿ ಬದಲಾವಣೆ ಮಾಡಿ ಹೊಸ ಹೆಸರು ಸೇರ್ಪಡೆ ವಿಚಾರ ತಿಳಿಸಿ ಆದ್ಯಕ್ಷರ ಆಯ್ಕೆ ಮಾಡಿದರೆ ಯಾವುದೇ ಗೊಂದಲವಿರುತ್ತಿರಲಿಲ್ಲ. ಇದೀಗ ಶಾಸಕರ ಗಮನಕ್ಕೆ ತರದೆ ಜಿಲ್ಲಾ ಅಧ್ಯಕ್ಷರು ಮಾಡಿದ ಆಯ್ಕೆ ಇದೀಗ ಗೊಂದಲಕ್ಕೆ ಕಾರಣವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆಯಂತೆ.
ಜೊತೆಗೆ ಶಾಸಕರ ವೈಯಕ್ತಿಕ ಖರ್ಚಿನಲ್ಲಿ ಈವರೆಗೆ ಬಂಟ್ವಾಳ ಬಿಜೆಪಿ ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ನಾಳೆಯಿಂದ ಬಿಜೆಪಿ ಕಚೇರಿಯ ಬಾಗಿಲು ತೆಗೆಯದಂತೆ ಶಾಸಕರು ತಾಕೀತು ಮಾಡಿದ್ದಾರೆ ಎಂದು ಹೇಳಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದೆ.
ಒಟ್ಟಿನಲ್ಲಿ ಬಂಟ್ವಾಳ ಬಿಜೆಪಿ ಪಕ್ಷದಲ್ಲಿ ಬಣ ರಾಜಕೀಯ ಜೋರಾಗಿದ್ದು, ಯಾವುದೇ ಕ್ಷಣದಲ್ಲಿ ಸ್ಪೋಟಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳುತ್ತಿದ್ದಾರೆ.