ಮಂಗಳೂರು, ಫೆ,4 (DaijiworldNews/SK): ಮಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಬ್ಯಾಟರಿ ಚಾಲಿತ ಆಟೋರಿಕ್ಷಾಗಳ ವಿರುದ್ಧ ದ.ಕ. ಜಿಲ್ಲಾ ಆಟೋರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟ ಮಂಗಳೂರು ವತಿಯಿಂದ ಫೆ. 5ರಂದು ಆಟೋರಿಕ್ಷಾ ಬಂದ್ ನಡೆಸಿ ಪ್ರತಿಭಟನೆ ನಡೆಸಲಿದೆ ಎಂದು ಆಟೋರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟದ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಆಟೋರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟ, ಫೆ. 5ರಂದು ಬೆಳಗ್ಗೆ 6ರಿಂದ ಪ್ರತಿಭಟನೆ ಆರಂಭವಾಗಿ ಬೆಳಗ್ಗೆ 10.30ಕ್ಕೆ ಮಂಗಳೂರು ನಗರದ ಅಂಬೇಡ್ಕರ್(ಜ್ಯೋತಿ) ವೃತ್ತದಿಂದ ಆರ್ ಟಿಓ ಕಚೇರಿ ತನಕ ಆರ್ಟಿಓ ಚಲೋ ಪ್ರತಿಭಟನಾ ಜಾಥಾ ನಡೆಯಲಿದೆ ಎಂದು ತಿಳಿಸಿದ್ದಾರೆ.
2022 ರ ನ. 25 ರ ಬಳಿಕ ನೋಂದಣಿಯಾದ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳಿಗೆ ವಲಯ 1ರ ಕ್ರಮ ಸಂಖ್ಯೆ ನೀಡಬಾರದು. ನಗರದಿಂದ ಹೊರಗಡೆ ಅವುಗಳು ಸಂಚರಿಸಬೇಕು. ನಗರದಲ್ಲಿರುವ ಆಟೋ ನಿಲ್ದಾಣಗಳ ಸಮಸ್ಯೆ ಬಗೆಹರಿಸಬೇಕು. ಪರವಾನಿಗೆ ಇಲ್ಲದೆ ಓಡಾಟ ನಡೆಸುವ ರಿಕ್ಷಾಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು.
ಇನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಆಟೋ ರಿಕ್ಷಾಗಳ ಪರವಾನಿಗೆಯನ್ನು ಬ್ಯಾಟರಿ ಚಾಲಿತ ರಿಕ್ಷಾಗಳಿಗೆ ವರ್ಗಾಯಿಸಲು ಅವಕಾಶ ನೀಡಬಾರದು. ಇದರೊಂದಿಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬಂದ್ ನಡೆಸಲಾಗುವುದು ಎಂದು ಆಟೋರಿಕ್ಷಾ ಚಾಲಕ ಮಾಲಕರ ಸಂಘಗಳ ಒಕ್ಕೂಟ ತಿಳಿಸಿದೆ.