ಕುಂದಾಪುರ, ಫೆ 04 (DaijiworldNews/HR): ಉಡುಪಿ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ನೇಮಕವಾದ ಕುಂದಾಪುರದ ಬಿ. ಕಿಶೋರ್ ಕುಮಾರ್ ಅವರಿಗೆ ಶನಿವಾರ ಕುಂದಾಪುರ ಬಿಜೆಪಿ ಮಂಡಲದ ವತಿಯಿಂದ ಪಕ್ಷದ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಬಹುಮತ ಸಿಗದಿದ್ದರೂ, ಉಡುಪಿ ಜಿಲ್ಲೆಯಲ್ಲಿ ಎಲ್ಲ 5 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲುವಷ್ಟು ಸದೃಢವಾಗಿ ರೂಪುಗೊಂಡಿದೆ. ಪಕ್ಷವನ್ನು ಬೂತ್ ಮಟ್ಟದಿಂದ ಇನ್ನಷ್ಟು ಬಲಪಡಿಸುವ ಜತೆಗೆ ಶಕ್ತಿ ತುಂಬುವ ಕಾರ್ಯ ಜಿಲ್ಲಾಧ್ಯಕ್ಷರಿಂದ ಆಗಲಿ. ಈ ಜಿಲ್ಲಾಧ್ಯಕ್ಷ ಹುದ್ದೆ ಜಿಲ್ಲೆಯಲ್ಲಿಯೇ ಮಹತ್ವವಾದ ಸ್ಥಾನಮಾನವಾಗಿದ್ದು, ಮುಂಬರುವ ಲೋಕಸಭೆ, ಜಿ.ಪಂ., ತಾ.ಪಂ. ಚುನಾವಣೆಗಳು, ಪುರಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಸಂಪೂರ್ಣ ಗೆಲ್ಲಿಸುವ ಸವಾಲು ಇವರ ಮೇಲಿದೆ ಎಂದು ಹಾರೈಸಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕುಂದಾಪುರದವರಿಗೆ ಈ ಜಿಲ್ಲಾಧ್ಯಕ್ಷ ಹುದ್ದೆ ಬಂದಿರುವುದು ಖುಷಿ ತಂದಿದೆ. ಪಕ್ಷ ಸಂಘಟನೆಗೆ ಶಾಸಕನಾಗಿ ಎಲ್ಲ ರೀತಿಯಿಂದಲೂ ಸಹಕರಿಸಲಾಗುವುದು ಎಂದರು.
ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಇದು ಬಯಸದೇ ಬಂದ ಭಾಗ್ಯ. ಕಾರ್ಯಕರ್ತರೊಂದಿಗಿನ ನಿರಂತರ ಸಂಬಂಧ ಈ ಹಂತಕ್ಕೆ ಬೆಳೆಸಿದೆ. ಈ ಜವಾಬ್ದಾರಿ ಸಿಗುವಲ್ಲಿ ನೆರವಾದ ಎಲ್ಲ ಹಿರಿಯ, ಕಿರಿಯರೆಲ್ಲರಿಗೂ ಋಣಿ ಎಂದರು.
ಮಂಗಳೂರು ಸಹ ಪ್ರಭಾರಿ ರಾಜೇಶ್ ಕಾವೇರಿ ಮಾತನಾಡಿದರು. ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ವಿಠಲ ಪೂಜಾರಿ ಐರೋಡಿ, ಜಿಲ್ಲಾ ಕಾರ್ಯದರ್ಶಿಗಳಾದ ಸದಾನಂದ ಬಳ್ಕೂರು, ಅನಿತಾ ಶ್ರೀಧರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ್ ಕಳಂಜಿ, ಪುರಸಭೆ ಸದಸ್ಯರು, ಪಕ್ಷದ ಪ್ರಮುಖರು, ಮಂಡಲದ ಪದಾಽಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮಂಡಲದ ಪ್ರ. ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಗೋಪಾಡಿ ಸ್ವಾಗತಿಸಿ, ಸತೀಶ್ ಪೂಜಾರಿ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.