ಕುಂದಾಪುರ ನ 16: ಕೆಪಿಎಂಇ ತಿದ್ದುಪಡಿ ವಿರೋಧಿಸಿ ನಡೆಯುತ್ತಿರುವ ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆ ಕುಂದಾಪುರದಲ್ಲಿ ಸಾರ್ವಜನಿಕರು ಸಮಸ್ಯೆಗಳನ್ನ ಅನುಭವಿಸಿದರು. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದು. ತುರ್ತು ಚಿಕಿತ್ಸೆ ಅಗತ್ಯವಿದ್ದವರು ಸರ್ಕಾರಿ ಆಸ್ಪತ್ರೆ ಕಡೆ ಮುಖ ಮಾಡಿದ್ದರು.
ಇಬ್ಬರು ವೈದ್ಯಾಧಿಕಾರಿಗಳು ರಜೆ
ತಾಲೂಕು ಆಸ್ಪತ್ರೆಯಲ್ಲಿ ಗುರುವಾರ ಇಬ್ಬರು ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಗೈರಾಗಿದ್ದು. ಅನಾರೋಗ್ಯ ನಿಮ್ಮಿತ್ತ ಓರ್ವ ವೈದ್ಯಾಧಿಕಾರಿ ಗೈರಾಗಿದ್ದರೆ, ತರಬೇತಿ ಹಿನ್ನೆಲೆ ಇನ್ನೊರ್ವ ವೈದ್ಯಾಧಿಕಾರಿಗಳು ರಜೆ ಮೇಲೆ ತೆರಳಿದ್ದಾರೆ ಎಂದು ಮುಖ್ಯ ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಾಲೂಕು ಆಸ್ಪತ್ರೆಯಲ್ಲಿ ಕೆಲ ಸೇವೆ ಲಭ್ಯವಿಲ್ಲ
ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಕೆಲ ವಿಭಾಗಗಳಲ್ಲಿ ವೈದ್ಯರು ಲಭ್ಯವಿಲ್ಲದ ಕಾರಣ ಚಿಕಿತ್ಸೆ ಲಭಿಸದೆ ವಾಪಾಸು ತೆರಳಿದ ಘಟನೆ ಕೂಡ ನಡೆದಿದೆ. ಅಮಾಸೆಬೈಲಿನಿಂದ ಬಂದ ಮಹಿಳೆಯೋರ್ವಳು ತನ್ನ ಕಾಲಿನಲ್ಲಿ ಉಂಟಾಗಿದ್ದ ಚರ್ಮವ್ಯಾದಿ ಚಿಕಿತ್ಸೆಗೆಂದು ಬಂದಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಲಭ್ಯವಿಲ್ಲದ ಕಾರಣ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿಯೂ ಕೂಡ ಚರ್ಮ ವ್ಯಾಧಿಗೆ ಸಂಬಂಧಿಸಿದ ವೈದ್ಯರಿಲ್ಲದ ಕಾರಣ ಆಕೆ ಚಿಕಿತ್ಸೆ ಲಭಿಸದೆ ವಾಪಾಸಾಗಿದ್ದಾರೆ.
ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡಿ ವಾಪಾಸಾಗುತ್ತಿರುವ ರೋಗಿಗಳು
ಕೆಲ ರೋಗಿಗಳು ನಿರ್ದಿಷ್ಟ ವೈದ್ಯರಲ್ಲಿ ಚಿಕಿತ್ಸೆಗೆಂದು ಬರುತ್ತಿದ್ದು, ಗುರುವಾರ ಕೂಡ ಪ್ರತಿಭಟನೆಯ ಮಾಹಿತಿಯಿಲ್ಲದೆ ಕೆಲ ರೋಗಿಗಳು ಖಾಸಗಿ ಆಸ್ಪತ್ರೆ ಕಡೆ ಬಂದಿದ್ದರು. ಆಸ್ಪತ್ರೆಯ ಮುಂಭಾಗದಲ್ಲಿ ಅಳವಡಿಸಿದ ಬ್ಯಾನರ್ ಕಂಡು ವಾಪಾಸಾಗುತ್ತಿದ್ದ ಘಟನೆ ಕೂಡ ನಡೆದಿದೆ. ದೂರದ ಸಾಗರದಿಂದ ಬಂದ ಕೃಷ್ಣ ಎಂಬ ವ್ಯಕ್ತಿಯೋರ್ವರು ತನ್ನ ಹೆಂಡತಿಯ ವೈದ್ಯಕೀಯ ಚಿಕಿತ್ಸೆಗೆಂದು ಸಾಗರದಿಂದ ಬಂದಿದ್ದು ವೈದ್ಯರ ಮುಷ್ಕರದ ಸುದ್ದಿ ಕೇಳಿ ಬಂದ ದಾರಿಗೆ ಸುಂಕವಿಲ್ಲವೆಂದು ಮರಳಿದ್ದಾರೆ. ಈ ಸಂಧರ್ಭ ಮಾಧ್ಯಮ ಪ್ರತಿನಿಧಿಗಳು ನಿಮಗೆ ಪ್ರತಿಭಟನೆಯ ಮಾಹಿತಿಯಿಲ್ಲವೇ ಎಂದು ಪ್ರಶ್ನಿಸಿದಾಗ ಮುಷ್ಕರ ನಡೆಯುತ್ತಿದೆ ಎಂದು ಗೊತ್ತು, ನಿನ್ನೆ ಮುಕ್ತಾಯವಾಗಿದೆ ಎಂದು ತಿಳಿದು ಬಂತು ಅದಕ್ಕಾಗಿ ಬಂದೆ ಎಂದು ಉತ್ತರಿಸಿದರು.