ಮಂಗಳೂರು, ಫೆ 03 (DaijiworldNews/HR): ಕೋಚಿಮುಲ್ ನೇಮಕಾತಿ ಹಗರಣದಲ್ಲಿ ಮಂಗಳೂರು ವಿವಿಗೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ವಿವಿ ಆಡಳಿತದ ವಿರುದ್ದ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಸಿಡಿದೆದ್ದು ಪ್ರತಿಭಟನೆ ನಡೆಸುತ್ತಿದೆ.
ಪರಿಕ್ಷಾಂಗ ಕುಲಸಚಿವರ ಅಮಾನತಿಗೆ ಹಾಗೂ ಮಂಗಳೂರು ವಿವಿ ಕುಲಪತಿ ರಾಜೀನಾಮೆಗೆ ಆಗ್ರಹಿಸಿ ಎಬಿವಿಪಿ ಹೋರಾಟ ನಡೆಸುತ್ತಿದ್ದು, ಕೊಣಾಜೆಯ ಮಂಗಳೂರು ವಿವಿ ಆಡಳಿತ ಸೌಧಕ್ಕೆ ಎಬಿವಿಪಿ ಮುತ್ತಿಗೆ ಹಾಕಿದೆ. ಭಾರೀ ಪೊಲೀಸ್ ಭದ್ರತೆ ಮಧ್ಯೆಯೂ ವಿವಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
ಪರೀಕ್ಷಾ ಪೂರ್ವದಲ್ಲೇ ಕೋಚಿಮುಲ್ ನೇಮಕಾತಿ ಪರೀಕ್ಷೆ ಪ್ರಶ್ನಾ ಪತ್ರಿಕೆ ಸೋರಿಕೆ ಆರೋಪ ಬಂದಿದ್ದು, ಮಂಗಳೂರು ವಿವಿ ಅಧಿಕಾರಿಗಳಿಂದ ಪ್ರಶ್ನೆಪತ್ರಿಕೆ ಮಾರಾಟ ಶಂಕೆ ವ್ಯಕ್ತವಾದ ಬೆನ್ನಲ್ಲೇ ಮಂಗಳೂರು ವಿವಿಗೆ ಇ.ಡಿ ಅಧಿಕಾರಿಗಳ ಟೀಂ ದಾಳಿ ಮಾಡಿತ್ತು.
ಇನ್ನು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನೇಮಕಾತಿ ಪ್ರಕ್ರಿಯೆ ಅವ್ಯವಹಾರ ತನಿಖೆಯನ್ನು ಇ.ಡಿ ನಡೆಸುತ್ತಿದ್ದು, ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ರಾಜುಕೃಷ್ಣ ಚಲನ್ನವರ್ ಇಡಿ ವಿಚಾರಣೆ ನಡೆಸಿದೆ.
ಕೋಚಿಮುಲ್ ನೇಮಕಾತಿ ಪರೀಕ್ಷಾ ಜವಾಬ್ದಾರಿ ರಾಜುಕೃಷ್ಣ ವಹಿಸಿಕೊಂಡಿದ್ದು, ಅಭ್ಯರ್ಥಿಗಳಿಗೆ ಪರಿಕ್ಷಾ ಪೂರ್ವದಲ್ಲೇ ಪ್ರಶ್ನೆಪತ್ರಿಕೆ ಮಾರಾಟದ ಅನುಮಾನ ಹಿನ್ನೆಲೆ ವಿಚಾರಣೆ ನಡೆಸಲಾಗಿದೆ. ಕೋಚಿಮುಲ್ ನೇಮಕಾತಿ ಹಗರಣದಲ್ಲಿ ಮಂಗಳೂರು ವಿವಿ ನೇರ ಭಾಗಿ ಶಂಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ವಿವಿ ಆಡಳಿತದ ವಿರುದ್ದ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ.