ಉಳ್ಳಾಲ, ಫೆ 02 (DaijiworldNews/HR): ಕಳೆದ ನಾಲ್ಕು ವರ್ಷಗಳಿಂದ ಕಾರಣಾಂತರಗಳಿಂದ ತೊಕ್ಕೊಟ್ಟು ಒಳಪೇಟೆಯ ಮಾರುಕಟ್ಟೆಯ ಸಾರ್ವಜನಿಕ ಏಲಂ ಪ್ರಕ್ರಿಯೆ ಫೆ.3 ರಂದು 11ಕ್ಕೆ ಉಳ್ಳಾಲ ನಗರಸಭೆಯ ಸಭಾಭವನದಲ್ಲಿ ಜರಗಲಿದೆ ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ಶಿಥಿಲಾವಸ್ಥೆಯಲ್ಲಿದ್ದ ತೊಕ್ಕೊಟ್ಟು ಒಳಪೇಟೆ ಮಾರುಕಟ್ಟೆಯನ್ನು ನೆಲಸಮ ಮಾಡಲಾಗಿತ್ತು. ಬಳಿಕ ನಗರೋತ್ಥಾನ ಹಂತ-3 ಯೋಜನೆಯಡಿ ಹೊಸದಾಗಿ ಮಾರುಕಟ್ಟೆ ನಿರ್ಮಿಸಲಾಗಿದೆ. 23 ಮಳಿಗೆಗಳನ್ನು ಹೊಂದಿರುವ ಮಾರುಕಟ್ಟೆಯ ಏಲಂ ಪ್ರಕ್ರಿಯೆ ಕಳೆದ ನಾಲ್ಕು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ನಡೆದಿರಲಿಲ್ಲ. ಮಾರುಕಟ್ಟೆ ನೆಲಸಮವಾಗುವ ಮುನ್ನ ಒಟ್ಟು 16 ಜನ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಿದ್ದರು. ಹೊಸ ಕಟ್ಟಡ ಕಟ್ಟುವ ಸಂದರ್ಭ ಎಲ್ಲರನ್ನು ತೆರವುಗೊಳಿಸಲಾಗಿತ್ತು.
ಇನ್ನು 2019ರ ಜು.7 ರಂದು ಕಟ್ಟಡ ಕಾಮಗಾರಿ ಪೂರ್ಣಗೊಂಡಾಗ ಹಿಂದೆ ಇದ್ದ 16 ವ್ಯಾಪಾರಸ್ಥರಿಗೆ 200 ಚದರ ಅಡಿಯವರೆಗೆ ಅಂಗಡಿ ಮಳಿಗೆಯನ್ನು ನೀಡಲು ಸರಕಾರದ ಸುತ್ತೋಲೆಯಂತೆ ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಅಂಗಡಿ ಮಾಲೀಕರು ಮಳಿಗೆಗಳ ಬಾಡಿಗೆ ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದವರಿಗೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕ್ರಮಕೈಗೊಳ್ಳಲಾಗಿದೆ. ಉಳಿದ 7 ಅಂಗಡಿ ಮಳಿಗೆಗಳನ್ನು ಸರಕಾರದ ಸುತ್ತೋಲೆಯಂತೆ ಸಾಮಾನ್ಯ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನರಿಗೆ ಕಾದಿರಿಸಲಾಗಿದೆ. ಉಳಿದ ಮೀನುಮಾರುಕಟ್ಟೆಯನ್ನು ಸಾರ್ವಜನಿಕರಿಗೆ ಮುಕ್ತವಾಗಿ ಹರಾಜು ಮಾಡಲಾಗುವುದು. ಈ ಕ್ರಮ ಸರಕಾರದ ಸುತ್ತೋಲೆ ಪ್ರಕಾರ ಪಾರದರ್ಶಕವಾಗಿ ನಗರಸಭೆಯಿಂದ ಮಾಡಲಾಗುತ್ತಿದೆ. ಇಲ್ಲಿ ಯಾವುದೇ ನಿಯಮಗಳ ಉಲ್ಲಂಘಟನೆ ನಡೆದಿಲ್ಲ ಎಂದು ಉಳ್ಳಾಲ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.