ಉಡುಪಿ, ಫೆ 02 (DaijiworldNews/HR): ಕೇಂದ್ರ ವಿತ್ತ ಸಚಿವೆ ಮಂಡಿಸಿದ ಕೇಂದ್ರ ಬಜೆಟ್ ನೀರಸ ಜಗತ್ತಿಗೆ 'ಭಾರತ ಒಂದೇ ಭರವಸೆ' ಎಂಬ ಮಾತಿನಂತೆ ಉತ್ತರದಾಯಿಯಾಗಿ ಮೂಡಿ ಬಂದಿದೆ. ಯಾವುದೇ ಜನ ಮರುಳು ಕಾರ್ಯಕ್ರಮ ಇಲ್ಲದ 'ಅಭಿವೃದ್ಧಿ ಒಂದೇ ಮಂತ್ರ' ಎಂಬ ದೂರದೃಷ್ಠಿಯ ಬಜೆಟ್ ಇದಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕೇಂದ್ರ ಬಜೆಟ್ ಕುರಿತು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫೆಡರಲ್ ಸಿಸ್ಟಮ್ನಲ್ಲಿರುವ ಭಾರತದಂತಹ ದೇಶದಲ್ಲಿ ಇಂತಹ ಬಜೆಟ್ ಮಂಡಿಸಲು ನಿಖರವಾದ ದೂರದೃಷ್ಟಿ ಇಟ್ಟುಕೊಂಡ ಸದೃಢ ಸರಕಾರದಿಂದ ಮಾತ್ರ ಸಾಧ್ಯ. 2028-29ನೇ ವರ್ಷಕ್ಕೆ ಪ್ರಪಂಚದ 3ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಭಾರತವನ್ನು ಬೆಳೆಸಬೇಕೆಂದು ಪಣತೊಟ್ಟು, ಆತ್ಮ ನಿರ್ಭರ ಪರಿಕಲ್ಪನೆಯೊಂದಿಗೆ ದೇಶದ ರೈತರು, ಸಣ್ಣ ಉದ್ದಿಮೆದಾರರು ಮತ್ತು ಬಡ ಮಧ್ಯಮ ವರ್ಗದವರನ್ನು ಮೇಲೆತ್ತುವ ಉದಾತ್ತ ಯೋಜನೆಯೊಂದಿಗೆ ಮಂಡಿಸಿರುವ ಸಂಪೂರ್ಣ ಸ್ವಾವಲಂಬಿ ಬಜೆಟ್ ಇದಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಆರ್ಥಿಕ ಪ್ರಕೋಷ್ಟದ ಜಿಲ್ಲಾ ಸಂಚಾಲಕ ದಿವಾಕರ ಶೆಟ್ಟಿ ಕೆ. ಇವರು ಕೇಂದ್ರ ಬಜೆಟನ್ನು ವಿಶ್ಲೇಷಿಸಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪೆರಣಂಕಿಲ ಶ್ರೀಶ ನಾಯಕ್, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಬಿಜೆಪಿ ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಜಿಲ್ಲಾ ಸಹ ವಕ್ತಾರರಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.