ಉಡುಪಿ, ಫೆ 01 (DaijiworldNews/PC): ಉಡುಪಿಯ ನೇಜಾರಿನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ. ಮೊದಲ ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲು ಮಲ್ಪೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಕೃತ್ಯ ನಡೆದ ದಿನದಿಂದ 90 ದಿನಗಳೊಳಗೆ ಪೊಲೀಸರು ಪ್ರಕರಣದ ತನಿಖೆ ಪೂರ್ಣಗೊಳಿಸಿ ಮೊದಲ ಹಂತದ ಚಾರ್ಜ್ ಶೀಟ್ನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಅದರಂತೆ ನ.12ರ ನೇಜಾರು ಕೊಲೆ ಪ್ರಕರಣ ನಡೆದು ಫೆ.12ಕ್ಕೆ 90 ದಿನಗಳು ಪೂರ್ಣಗೊಳ್ಳಲಿದೆ.
ನೇಜಾರು ಪ್ರಕರಣದ ಚಾರ್ಜ್ಶೀಟ್ನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದು, ಗಂಭೀರ ಪ್ರಕರಣವಾಗಿರುವುದರಿಂದ ಇದರ ವಿಚಾರಣೆಯು ಉಡುಪಿ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಯಾಗಲಿದ್ದು, ಈ ಪ್ರಕ್ರಿಯೆಯು ಚಾರ್ಜ್ಶೀಟ್ ಸಲ್ಲಿಸಿದ ದಿನವೇ ಆಗುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿಯನ್ನು ನೀಡಿದ ಉಡುಪಿ ಎಸ್ಪಿ ಡಾ.ಅರುಣ್ ಕೆ ಅವರು ನೇಜಾರಿನ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಎಫ್ಎಸ್ಎಲ್ ವರದಿ ಗಳೆಲ್ಲವೂ ನಮ್ಮ ಕೈಸೇರಿದೆ. ಈ ಕುರಿತ ಚಾರ್ಜ್ಶೀಟ್ನ್ನು ಸಿದ್ಧ ಪಡಿಸುತ್ತಿದ್ದು, ಫೆ. ಮೊದಲ ವಾರದಲ್ಲಿ ಕೋರ್ಟ್ಗೆ ಸಲ್ಲಿಸಲು ಎಲ್ಲ ರೀತಿಯ ಪ್ರಯತ್ನ ಗಳನ್ನು ಮಾಡಲಾಗುತ್ತಿದೆ ಎಂದರು.