ಉಳ್ಳಾಲ,ಜ 31 (DaijiworldNews/MS): ಉಳ್ಳಾಲ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಉಳ್ಳಾಲ ತಾಲೂಕು ಇದರ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಫೆ 1ರ ಬೆಳಿಗ್ಗೆ 9.30 ಕ್ಕೆ ಜರಗಲಿದೆ ಎಂದು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಜಿಲ್ಲಾಧ್ಯಕ್ಷೆ ಚಂಚಲ ತೇಜೋಮಯ ಹೇಳಿದರು.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿದ್ದು, ದ.ಕ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಚಂಚಲ ತೇಜೋಮಯ ಅಧ್ಯಕ್ಷ ತೆ ವಹಿಸಲಿದ್ದಾರೆ. ಸ್ವಾಗತ ಮತ್ತು ಪ್ರಸ್ತಾವನೆಯನ್ನು ಉಳ್ಳಾಲ ತಾಲೂಕು ಮಹಿಳಾ ಮಂಡಳಿಗಳ ನೂತನ ಅಧ್ಯಕ್ಷೆ ದೇವಕಿ ಆರ್ ಉಳ್ಳಾಲ್ ನೆರವೇರಿಸಲಿದ್ದು, ಉಳ್ಳಾಲ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಬಾಲಕೃಷ್ಣ, ಉಳ್ಳಾಲ ನಗರಸಭೆ ಪೌರಾಯುಕ್ತ ವಾಣಿ ಆಳ್ವ, ಉದ್ಯಮಿ ಜಬ್ಬಾರ್, ಸಾಮಾಜಿಕ ಕಾರ್ಯಕರ್ತ ಸುರೇಶ್ ಭಟ್ನಗರ, ಸೋಮೇಶ್ವರ ಪುರಸಭೆ ಕಾರ್ಯನಿರ್ವಹಣಾಧಿಕಾರಿ ಮತ್ತಡಿ, ಜಿ.ಪಂ ಮಾಜಿ ಅಧ್ಯಕ್ಷೆ ಕಸ್ತೂರಿ ಪಂಜ, ಉದ್ಯಮಿ ಮಹಮ್ಮದ್ ಆಸೀಫ್ ಇಬ್ರಾಹಿಂ, ಎ.ಜೆ. ಶೇಖರ್ ಭಾಗವಹಿಸಲಿದ್ದಾರೆ.
ಮಹಿಳಾ ಸಬಲೀಕರಣ, ಪುನಶ್ಚೇತನ, ಮಹಿಳೆಯರು ಮತ್ತು ಮಕ್ಕಳ ಶ್ರೇಯೋಭಿವೃದ್ಧಿಗೆ ದುಡಿಯುವ ಉದ್ದೇಶದಿಂದ ಒಕ್ಕೂಟ ಸ್ಥಾಪಿಸಲಾಗುತ್ತಿದ್ದು, ಮುಲ್ಕಿ, ಮೂಡಬಿದ್ರಿ , ಕಡಬ ತಾಲುಕುಗಳಲ್ಲಿ ಮಹಿಳಾ ಮಂಡಳಿಗಳ ಒಕ್ಕೂಟಗಳ ಸ್ಥಾಪನೆಯಾಗಿದ್ದು, ಇದೀಗ ಉಳ್ಳಾಲ ತಾಲೂಕಿನಲ್ಲಿ ಹೊಸ ಒಕ್ಕೂಟದ ಸ್ಥಾಪನೆಯಾಗುತ್ತಿದೆ. ತಾಲೂಕಿನ 50 ಕ್ಕೂ ಅಧಿಕ ಮಹಿಳಾ ಸಂಘಟನೆಗಳು ಜತೆಯಾಗಿದ್ದುಕೊಂಡು, ಮಹಿಳೆಯರ ಅಭಿವೃದ್ಧಿ ಗೆ ಶ್ರಮವಹಿಸುತ್ತಿದೆ. ತೊಕ್ಕೊಟ್ಟು ಕಲ್ಲಾಪುವಿನ
ಗ್ರೀನ್ ಸಿಟಿ ಕಾರುಣ್ಯ ಸದನ ದಲ್ಲಿ ತಾತ್ಕಾಲಿಕ ಕಚೇರಿ ಕಾರ್ಯಾಚರಣೆ ನಡೆಸುತ್ತಿದೆ. ಶಾಲೆಯಲ್ಲಿ ಉಳಿದ ಮಕ್ಕಳ ಶಿಕ್ಷಣಕ್ಕೆ ಒತ್ತು ಸೇರಿದಂತೆ ಸಮಾಜಕ್ಕೆ ಪೂರಕವಾದ ಕಾರ್ಯಗಳನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳನ್ನು ಸೇರಿಸಿಕೊಂಡು ಒಕ್ಕೂಟ ಮುಂದಿನ ದಿನಗಳಲ್ಲಿ ನಡೆಸಲಿದೆ ಎಂದರು.
ಈ ಸಂದರ್ಭ ನೂತನ ಅಧ್ಯಕ್ಷೆಯಾಗಲಿರುವ ದೇವಕಿ ಆರ್ ಉಳ್ಳಾಲ್, ಉಪಾಧ್ಯಕ್ಷೆ ಸ್ವಪ್ನ ಹರೀಶ್, ಕೋಶಾಧಿಕಾರಿ ಶಶಿಕಾಂತಿ ಉಳ್ಳಾಲ, ಶಶಿಕಲಾ, ಸಾಂಸ್ಕೃತಿಕ ಕಾರ್ಯದರ್ಶಿ ಜೆಸಿಂತಾ ಮೆಂಡೋನ್ಸ, ಕ್ರೀಡಾ ಕಾರ್ಯದರ್ಶಿ ಪ್ರೇಮ ಮುಗ್ಗಪ್ಪ, ಕಾರ್ಯದರ್ಶಿ ದಾಕ್ಷಾಯಿಣಿ ಎಸ್.ಜೆ., ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶಶಿಕಲಾ, ಸಂಘಟನಾ ಕಾರ್ಯದರ್ಶಿ ಝೀನಬ್, ಲತಾ ತಲಪಾಡಿ, ಹೇಮಾ ಅಶೋಕ್ ಉಪಸ್ಥಿತರಿದ್ದರು.