ಉಡುಪಿ, ಜ 31 (DaijiworldNews/MS): "ನಾಡಿಗೆ ಸುಭೀಕ್ಷೆ ಲಭಿಸುವ ಆಶಯದಿಂದ ಭುವನೇಂದ್ರ ಕಿದಿಯೂರು ಅವರು ಮೂರನೇ ಬಾರಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ ವನ್ನು ಆಯೋನನೆ ಮಾಡಿದ್ದಾರೆ. ಇದರ ಮೂಲಕ ನಾಡಿಗೆ ಸಮೃದ್ದಿ ಮತ್ತು ಭುವನೇಂದ್ರ ಕಿದಿಯೂರು ಅವರ ನೂತನ ಶಿಕ್ಷಣ ಸಂಸ್ಥೆ ಗೆ ಉತ್ತರೋತ್ತರ ಅಭಿವೃದ್ದಿ ಪ್ರಾಪ್ತಿಯಾಗಲಿ" ಎಂದು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಕಿದಿಯೂರು ಹೋಟೆಲ್ ಪ್ರೈವೇಟ್ ಲಿಮಿಟೆಡ್ ನ ವತಿಯಿಂದ ಕಾರಣಿಕ ನಾಗ ಕ್ಷೇತ್ರದ ತೃತೀಯ ಅಷ್ಟಪವಿತ್ರ ನಾಗಮಂಡಲೋತ್ಸವ ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಪಲಿಮಾರು ಮಠಾಧೀಶರಾ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಕಿದಿಯೂರು ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ನ ವತಿಯಿಂದ ತುಲಾಭಾರ ಸೇವೆಯನ್ನು ಸರ್ಮಪಿಸಲಾಯಿತು.
ತುಲಾಭಾರ ಸೇವೆಯನ್ನು ಸ್ವೀಕರಿಸಿ ಆಶೀರ್ವಚವನ್ನಿತ್ತ ಪಲಿಮಾರು ಹಿರಿಯ ಶ್ರೀಪಾದರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು "ಇಂದಿನ ಈ ತುಲಾಭಾರ ನನಗೆ ಸಮರ್ಪಿಸಿದ್ದು ಅಲ್ಲ, ನಾನು ಸದಾ ಪೂಜಿಸುವ ಕೃಷ್ಣನಿಗೆ, ಮಧ್ವ ಚಾರ್ಯಾರಿಗೆ ಈ ತುಲಾಭಾರ ಸೇವೆ ಸಮರ್ಪಿತ. ಭುವನೇಂದ್ರ ಕಿದಿಯೂರು ಅವರು ಸದಾ ಕೃಷ್ಣ ಸೇವೆ ಮಾಡುವವರು. ಇಂದು ಇಲ್ಲಿ ಲಕ್ಷ್ಮೀನಾರಾಯಣ ರ ತುಲಾಭಾರ ನಡೆದಿದೆ. ಈ ತುಲಾಭಾರ ದಲ್ಲಿ ದೊರಕಿದ ದ್ರವ್ಯಗಳನ್ನು ಭುವನೇಂದ್ರ ಕಿದಿಯೂರು ಅವರು ಸ್ಥಾಪಿಸುತ್ತಿರುವ ನೂತನ ಶಿಕ್ಷಣ ಸಂಸ್ಥೆ ಗೆ ನಾನು ದಾನವಾಗಿ ನೀಡುತ್ತೇನೆ. ಭುವನೇಂದ್ರ ಕಿದಿಯೂರು ಅವರು ಈ ಸೇವೆಯ ಮೂಲಕ ತನ್ನನ್ನೇ ಕೃಷ್ಣ ದೇವರಿಗೆ ಸರ್ಮಪಿಸಿದ್ದಾರೆ" ಎಂದರು.
ಆಶೀರ್ವಚವನ್ನಿತ್ತ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಮಾತನಾಡಿ "ಭಾರತದ ಸಂಸ್ಕ್ರತಿ ವಿಶ್ಚಕ್ಕೆ ಆದರ್ಶವಾದದ್ದು. ಕರಾವಳಿಯಲ್ಲಿ ದೈವ ಭಕ್ತಿ ವಿಶೇಷವಾಗಿದೆ. ಪರಶುರಾಮ ನ ಸೃಷ್ಟಿ ಎಂದು ಕರೆಯಲ್ಪಡುವ ಈ ನಾಡಿನಲ್ಲಿ ನಾಗದೇವರ ಅನುಗ್ರಹ ಇದ್ದಲ್ಲಿ ಎಲ್ಲಾ ಕಾರ್ಯಗಳು ಸೂಸೂತ್ರವಾಗಿ ಮುಂದುವರೆಯುತ್ತದೆ. ಇಂತಹ ವಿಶೇಷ ಸಾನಿಧ್ಯ ಕಿದಿಯೂರು ಹೋಟೆಲ್ ನಲ್ಲಿದೆ. ಈ ದೇಶ ನಡೆಯುವುದೇ ರಾಮನಿಂದ. ಸೂಕ್ತ ಕಾಲದಲ್ಲಿ ಸೂಕ್ತ ವ್ಯಕ್ತಿಯಿಂದ ರಾಮ ಮಂದಿರ ಉದ್ಘಾಟನೆಗೊಂಡಿದೆ. ಮುಂದೆ ರಾಮರಾಜ್ಯ ಎಂಬ ಬಿರುದು ಕೂಡಾ ನಮಗೆ ಲಭಿಸಲಿದೆ. ಭುವನೇಂದ್ರರು ಇಂದ್ರನ ಸ್ಥಾನದಲ್ಲಿ ನಿಂತು ಈ ಧಾರ್ಮಿಕ ಕಾರ್ಯವನ್ನು ಇಲ್ಲಿ ನಡೆಸಿಕೊಡುತಿದ್ದಾರೆ ಅವರಿಗೆ ಶಂಕರನಂತೆ ಬೆನ್ನೆಲುಬಾಗಿ ನಾಡೋಜ ಡಾಕ್ಟರ್ ಜಿ ಶಂಕರ್ ಕೂಡಾ ನಿಂತಿದ್ದಾರೆ. ನಮಗೆ ಬಂದ ಸಂಪತ್ತು ದೇವರಿಗೆ ಸೇರಿದ್ದು, ಹೀಗಾಗಿ ಅದರ ಒಂದು ಭಾಗವನ್ನು ದೇವರಿಗೆ ನೀಡುತ್ತಾ ಭುವನೇಂದ್ರ ಕಿದಿಯೂರು ರವರು ನೀಡುತ್ತಾ ಬಂದಿದ್ದಾರೆ" ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ದಾಯ್ಜಿವಲ್ಡ್ ಮಾಧ್ಯಮ ಸಂಸ್ಥೆಯ ಸ್ಥಾಪಕರಾದ ವಾಲ್ಟರ್ ನಂದಳಿಕೆ ಮಾತನಾಡಿ "ಭುವನೇಂದ್ರ ಕಿದಿಯೂರು ಅವರು ಸರ್ವೇ ಜನಾ ಸುಖಿನೋ ಭವಂತು ಎಂಬುವುದರಲ್ಲಿ ನಂಬಿಕೆ ಇಟ್ಟವರು ಎಂಬುವುದನ್ನು ತೋರಿಸಿ ಕೊಟ್ಟಿದ್ದಾರೆ. ನಾನು ಕ್ರೈಸ್ತ ಧರ್ಮದಲ್ಲಿ ಹುಟ್ಟಿ ಬೆಳೆದವನು. ನಾವು ಯಾವ ಧರ್ಮದಲ್ಲಿ ಹುಟ್ಟಬೇಕು ಎನ್ನುವ ಆಯ್ಕೆ ನಮಗೆ ಇರುವುದಿಲ್ಲ. ಆದತೆ ಇಂದು ಈ ನಾಗಮಂಡಲೋತ್ಸವದ ಪವಿತ್ರ ಕಾರ್ಯದಲ್ಲಿ ಭಾಹವಹಿಸಿ ನನಗೆ ನಿಜಕ್ಕೂ ಸಂತೋಷವಾಗಿದೆ. ಇಂದು ನನ್ನನ್ನು ಇಲ್ಲಿ ಕರೆದು ವೇದಿಕೆ ಒದಗಿಸಿರುವುದು ಇದು ನನಗೆ ಮಾತ್ರವಲ್ಲ ಇದು ನನ್ನ ಇಡೀ ಸಮುದಾಯಕ್ಕೆ ಸಂದ ಗೌರವ. ನಾಗ ದೇವರ ಕುರಿತು ನಾವು ಹಲವಾರು ಬಾರಿ ಕೇಳಿದ್ದೇವೆ. ತುಳುನಾಡಿನ ಸಂಪ್ರದಾಯದ ನಾಗಮಂಡಲ, ತಂಬಿಲ, ಕೋಲ, ದೈವಾರಾಧನೆಗಳಲ್ಲಿ ಭಾಗವಹಿಸುವಾಗ ಸಿಗುವ ನೆಮ್ಮದಿ ನಿಜಕ್ಕೂ ಅನನ್ಯ. ಇದು ಕೇವಲ ಒಂದು ಧರ್ಮಕ್ಕೆ ಸೀಮಿತವಾದುದಲ್ಲ, ಇದು ನಮ್ಮ ತುಳುನಾಡಿನ ಜೀವನಶೈಲಿ. ಕೆಲವರು ದೇವರನ್ನು ಕಷ್ಟ ಬಂದಾಗ ನೆನೆಯುತ್ತಾರೆ. ಆದರೆ ಭುವನೇಂದ್ರ ಕಿದಿಯೂರು ಅವರು ದೇವರು ಅವರಿಗೆ ನೀಡಿದ ಆಶೀರ್ವಾದದಲ್ಲಿ ಧನ್ಯತಾಭಾವವನ್ನು ವ್ಯಕ್ತಪಡಿಸಿದ್ದಾರೆ ಈ ಮೂಲಕ ನಾವು ಕೂಡಾ ನಮಗೆ ದೇವರಿಂದ ಲಭಿಸಿದ ಆಶೀರ್ವಾದಕ್ಕೆ ಧನ್ಯತಾ ಭಾವವನ್ನು ವ್ಯಕ್ತಪಡಿಸಬೇಕು ಎಂದು ನಮಗೆ ಕರೆ ನೀಡಿದ್ದಾರೆ" ಎಂದರು.
ಆಗಮ ಪಂಡಿತರಾದ ಪಂಜ ಭಾಸ್ಕರ್ ಭಟ್ ಧಾರ್ಮಿಕ ಪ್ರವಚನ ನೀಡಿದರು.
ಕಾರ್ಯಕ್ರಮದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ಭುವನೇಂದ್ರ ಕಿದಿಯೂರು,ಕುಟುಂಬಸ್ಥರಾದ ಡಾಕ್ಟರ್ ಬ್ರಿಜೇಶ್ ಕಿದಿಯೂರು ಮತ್ತು ಡಾಕ್ಟರ್ ಶ್ವೇತಾ, ಡಾಕ್ಟರ್ ಯಜ್ಞೇಶ್ ಮತ್ತು ಶಿಲ್ಪಾ ಯಜ್ಞೇಶ್, ಜಿತೇಶ್ ಮತ್ತು ಪ್ರಿಯಾಂಕ, ಡಾಕ್ಟರ್ ಭಾಗ್ಯಶ್ರೀ ಮತ್ತು ಡಾಕ್ಟರ್ ಅಭಿನ್, ಯುವರಾಜ್ ಸಾಲ್ಯಾನ್ ಮಸ್ಕತ್ ಮತ್ತು ಮಲ್ಲಿಕಾ ಯುವರಾಜ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮ ದಲ್ಲಿ ನಾಗಮಂಡಲೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ನಾಡೋಜ ಡಾಕ್ಟರ್ ಜಿ ಶಂಕರ್, ಮಂಗಳೂರು ಇಸ್ಕಾನ್ ಸಂಸ್ಥೆಯ ಗುಣರಾಮ್ ದಾಸ್ ಪ್ರಭು, ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಉದ್ಯಮಿಗಳಾದ ಆನಂದ್ ಸಿ ಕುಂದರ್, ಪ್ರದೀಪ್ ಕುಮಾರ್ ಕಲ್ಕೂರ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ನಗರಸಭಾ ಸದಸ್ಯ ಟಿಜಿ ಹೆಗ್ಡೆ, ಉದ್ಯಮಿಗಳಾದ ಶಶಿಧರ್ ಶೆಟ್ಟಿ ಮಸ್ಕತ್, ಕಿಶೋರ್ ಕೃಷ್ಣ ಆವರ್ಸೇಕರ್, ಮನೋಹರ್ ಎಸ್ ಶೆಟ್ಟಿ, ಸುರೇಂದ್ರ ಕಲ್ಯಾಣಪುರ, ಹರಿರಾಂ ಆಚಾರ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, ಉಪಸ್ಥಿತರಿದ್ದರು.