ಕುಂದಾಪುರ, ಜ 30 (DaijiworldNews/HR): ಮಹಾತ್ಮ ಗಾಂಧಿ ಹುತಾತ್ಮ ದಿನವಾದ ಜನವರಿ 30ರಂದು ಸೌಹಾರ್ದ ಕರ್ನಾಟಕ ವೇದಿಕೆ ಆಶ್ರಯದಲ್ಲಿ ವಿವಿಧ ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ಶಿರೂರು, ಬೈಂದೂರು, ಮರವಂತೆ, ತ್ರಾಸಿ ಮಾನವ ಸರಪಳಿ ನಡೆಸಲಾಯಿತು.
ಕುಂದಾಪುರದಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದ ಬಳಿಕ ಶಾಸ್ತ್ರಿಸರ್ಕಲ್ ಬಳಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜನಪರ ಚಿಂತಕ ಫ್ರೋಫೆಸರ್ ಮೊಳಹಳ್ಳಿ ದಿನೇಶ್ ಹೆಗ್ಡೆ, ಸೌಹಾರ್ದ ಬಯಸುವ ಶಾಂತಿಪ್ರಿಯ ಮನಸ್ಸುಗಳು ಕೈ ಕೈ ಬೆಸೆಯುವ ಮುಖಾಂತರ ಗಾಂಧಿ ಸಂದೇಶವನ್ನು ಜಗತ್ತಿಗೆ ಸಾರುವ ಕೆಲಸ ಮಾಡಿರುವುದು ಶ್ಲಾಘನಿಯ ಎಂದರು.
ಅನಾದಿ ಕಾಲದಿಂದಲೂ ಮನುಷ್ಯರು ಪರಸ್ಪರ ಸೌಹಾರ್ದತೆಯಿಂದ ಬೆಳೆದು ಬಂದವರು. ಹಿಂದಿನಿಂದಲೂ ಕಾಯಕ ಮತ್ತು ದಾಸೋಹ ಅಂದರೆ ಉತ್ಪಾದನೆ ಮತ್ತು ವಿತರಣೆ ವಿಚಾರದಲ್ಲಿ ಬಸವಣ್ಣ ಹಾಕಿಕೊಟ್ಟ ಮಾರ್ಗ, ನಾರಾಯಣ ಗುರುಗಳ ಮೌನ ಕ್ರಾಂತಿ ಅಸ್ಪೃಷ್ಯತೆಯನ್ನು ಹೊಡೆದು ಹಾಕುವ ಜನಪರ ಹೋರಾಟಗಳು ಅಂದಿನಿಂದಲೂ ನಡೆದು ಬಂದಿವೆ. ಶೋಷಿತ ವರ್ಗಕ್ಕೆ ದೇಗುಲ ಪ್ರವೇಶಕ್ಕೆ ಅವಕಾಶಗಳನ್ನು ಕಲ್ಪಿಸುವ ಹೋರಾಟ ವೂ ನಡೆದು ಬಂದಿದೆ. ವರ್ಣಬೇಧಗಳು, ಲಿಂಗಬೇಧಗಳು ಹಿಂದಿನಿಂದಲೂ ಬೆಳೆದು ಬಂದಿತ್ತು. ಶಿಕ್ಷಣ ಕ್ರಾಂತಿಯಲ್ಲಿ ಹೊಸ ಭಾಷ್ಯ ಬರೆದ ಜ್ಯೋತಿ ಬಾಪುಲೆ ಸ್ಮರಣೀಯರು ಎಂದರು.
ಸಹಬಾಳ್ವೆ, ಮುಸ್ಲಿಂ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ದಲಿತ ಸಂಘರ್ಷ ಸಮಿತಿ, ಭೀಮ ಘರ್ಜನೆ,ಸಮುದಾಯ, ಕ್ಯಾಥೋಲಿಕ್ ಸಭಾ, ಸಿಐಟಿಯು,ಜನವಾದಿ ಮಹಿಳಾ ಸಂಘಟನೆ, ಡಿವೈಎಫ್ಐ,ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಮುಸ್ಲಿಂ ಜಮಾತೆ, ಆದಿವಾಸಿ ಹಕ್ಕುಗಳ ಸಮಿತಿ, ದಲಿತ ಹಕ್ಕುಗಳ ಸಮಿತಿ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಮಾನವ ಸರಪಳಿಯಲ್ಲಿ ಭಾಗವಹಿಸಿದ್ದವು. ಕರ್ನಾಟಕ ಸೌಹಾರ್ದ ವೇದಿಕೆಯ ಚಂದ್ರಶೇಖರ ವಿ ನಿರೂಪಿಸಿದರು. ಸುರೇಶ್ ಕಲ್ಲಾಗರ ವಂದಿಸಿದರು.