ಬೆಳ್ತಂಗಡಿ, ಜ 30(DaijiworldNews/AA): ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಡ್ತ್ಯಾರುನ ಪಟಾಕಿ ತಯಾರಿಕಾ ಘಟಕದಲ್ಲಿ ನಡೆದ ಸ್ಫೋಟದ ಹಿನ್ನಲೆ ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ. ಚೆನ್ನಣ್ಣನವರ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದುರಂತ ನಡೆದ ಸ್ಥಳಕ್ಕೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಡಿಐಜಿ ರವಿ ಡಿ. ಚೆನ್ನಣ್ಣನವರ್ ಅವರು ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಪರಿಶೀಲನೆ ನಡೆಸಿ ಮಾತನಾಡಿಸಿದ ಅವರು, ಈಗಾಗಲೆ ದಕ್ಷಿಣ ಕನ್ನಡ ಎಸ್ಪಿ ವರಿಷ್ಠಾಧಿಕಾರಿ ಸಹಿತ ವಿಶೇಷ ತಂಡ ಘಟನೆಯ ಕುರಿತಂತೆ ತನಿಖೆ ನಡೆಸುತ್ತಿದೆ. ಯಾವುದೇ ಸುರಕ್ಷತೆ ಇಲ್ಲದೇ ಸುಡುಮದ್ದು ತಯಾರಿಸುವ ಘಟಕಕ್ಕೆ ಅನುಮತಿ ನಿರಾಕರಿಸುವಂತೆ ಮತ್ತು ಬೇರೆ ಕಡೆ ಇರುವ ಸುಡುಮದ್ದು ತಯಾರಿಕಾ ಘಟಕದ ಕುರಿತು ಮುನ್ನೆಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಐಜಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದ್ದಾರೆ.
ಇನ್ನು ಘಟನೆಯಲ್ಲಿ ಕೇರಳದ ಸ್ವಾಮಿ (55), ವರ್ಗೀಸ್ (68), ಹಾಗೂ ಹಾಸದ ಅರಸೀಕೆರೆ ಮೂಲದ ಚೇತನ್ (25) ಸೇರಿ ಮೂವರು ಜನರು ಸಾವನ್ನಪ್ಪಿರುತ್ತಾರೆ.