ಸುಳ್ಯ, ಜ 30 (DaijiworldNews/MS): ಕಾಡಾನೆಯೊಂದು ಪೆರಾಜೆ ಗ್ರಾಮದಲ್ಲಿ ಸೋಮವಾರ ಮುಂಜಾನೆ ಸುತ್ತಾಡಿ ಪಯಸ್ವಿನಿ ನದಿ ದಾಟಿ ಪೂಮಲೆ ಬೆಟ್ಟಕ್ಕೆ ತೆರಳುವ ಸಂದರ್ಭ ಕನ್ನಡ ಪೆರಾಜೆ ಸಮೀಪ ನಿಂತಿದ್ದ ಓಮಿನಿ ಕಾರಿಗೆ ಹಾನಿ ಮಾಡಿ ತೆರಳಿರುವ ಘಟನೆ ವರದಿಯಾಗಿದೆ.
ಪೆರಾಜೆಯ ಉದ್ಯಮಿ ಉನೈಸ್ ಪೆರಾಜೆಯವರ ಕಾರು ಇದಾಗಿದ್ದು, ಕಾರಿನ ಚಾಲಕ ಗೂನಡ್ಕ ಅವಿನಾಶ್ ಕಾರಿನೊಳಗೆ ಕುಳಿತುಕೊಂಡು ಪೇಪರ್ ಓದುತ್ತಿರುವ ಸಂದರ್ಭ ಆನೆ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆನೆ ದಾಳಿ ಮಾಡುತ್ತಿದ್ದ ವೇಳೆ ಅವರು ಕಾರಿನ ಮುಂಬಾಗದ ಸೀಟಿನಲ್ಲಿ ಕುಳಿತಿದ್ದರು, ಕೈ ಗೆ ಸ್ವಲ್ಪ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ 8.30 ಕ್ಕೆ ಶಾಲಾ ವಿದ್ಯಾರ್ಥಿಗಳು ಇದೇ ಬಾಗದಲ್ಲಿ ಬರುವವರಾಗಿದ್ದು, ಗ್ರಾಮದಲ್ಲಿ ಆನೆ ಬಂದಿರುವ ಸುದ್ದಿ ಮತ್ತು ವೀಡಿಯೋ ತುಣುಕುಗಳು ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಎಚ್ಚರಿಕೆ ಸಂದೇಶ ವನ್ನು ಹರಿಯಬಿಡಲಾಗಿತ್ತು, ಇನ್ನು ಆನೆ ಗ್ರಾಮದ ಪೀಚೆ, ಕುಂಡಾಡು, ನಿಡ್ಯಮಲೆ, ಕುಂಬಳಚೇರಿ, ಕೋಡಿ, ಮತ್ತು ಪೀಜೆ ಭಾಗದಲ್ಲಿ ಸುತ್ತಾಡಿ ಪೂಮಲೆ ಬೆಟ್ಟಕ್ಕೆ ತೆರಳಿದೆ ಎನ್ನಲಾಗಿದೆ.
ಈ ಒಂಟಿ ಸಲಗ ಕಳೆದ ಆರೇಳು ವರ್ಷಗಳಿಂದ ನಿರಂತರವಾಗಿ ಇದೇ ಸಮಯದಲ್ಲಿ ಈ ಮಾರ್ಗವಾಗಿ ತೆರಳುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.
ಪೆರಾಜೆ ಗ್ರಾಮದಲ್ಲಿ ಆನೆ ಬಂದಿರುವ ಮಾಹಿತಿಯನ್ನು ಬೆಳಿಗ್ಗೆಯ ಸಮಯ ತಿಳಿಸಲು ಹೋದಾಗ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವರು ಗಾಯಗೊಂಡಿದ್ದಾರೆ. ಕೆಲವಡೆ ಕೃಷಿ ಬೆಳೆಗೆ ಹಾನಿ ಉಂಟು ಮಾಡಿದೆ ಎಂದು ತಿಳಿದು ಬಂದಿದೆ.