ಕುಂದಾಪುರ, ಜ 29 (DaijiworldNews/HR): ಪಂಚಗಂಗಾ ರೈಲು ಕರಾವಳಿಯ ಉದ್ಯೋಗಿಗಳಿಗೆ ಜೀವನ ರೇಖೆಯಾಗಿದ್ದು, ಈ ರೈಲು ಯಶಸ್ವಿಯಾಗಲು ಮೂಲ ಕಾರಣವೇ ಅದರ ಟೈಮ್ ಟೇಬಲ್. ಆದುದರಿಂದ ರೈಲಿನ ವೇಳಾಪಟ್ಟಿ ಬದಲಿಸದೇ ಹೆಚ್ಚುವರಿ ಕೋಚ್ ಅಳವಡಿಸುವಂತೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಆಗ್ರಹಿಸಿದ್ದಾರೆ.
ಹೆಚ್ವುವರಿ ಕೋಚ್ ಹಾಕಿದರೆ ಬೆಂಗಳೂರು ಮುಟ್ಟುವ ಸಮಯ ವಿಳಂಭವಾಗಲಿದೆ ಎಂಬ ಉತ್ತರ ಹಿಂದಿನಿಂದಲೂ ರೈಲ್ವೇ ಇಲಾಖೆ ನೀಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಕೋಚ್ ಹಾಕುವುದಾದರೆ ಯಾವ ಕಾರಣಕ್ಕೂ ರೈಲಿನ ಸಮಯ ಬದಲಾಗ ಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಬೆಂಗಳೂರಿಗೆ ಐದೇ ಐದು ನಿಮಿಷ ವಿಳಂಭವಾಗಿ ಹೋದರೂ ಬೆಂಗಳೂರು ಟ್ರಾಪಿಕ್ ನಲ್ಲಿ ಸಿಲುಕಿ ಜನ ಕಚೇರಿಗಳಿಗೆ ರಜೆ ಹಾಕಬೇಕಾದ ಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೇ ನಿಗಮ ಕೆಲವೊಂದು ಖಾಸಗಿ ಲಾಬಿಗಳ ಜತೆ ಶಾಮೀಲಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೂರುಗಳು ಬರುತಿದ್ದು , ಹೆಚ್ವುವರಿ ಬೋಗಿ ಹಾಕಿ ಪಂಚಗಂಗಾ ರೈಲಿನ ಸಮಯ ಹಾಳು ಮಾಡುವ ಸಂಚು ರೂಪಿಸಲಾಗಿದೆಯೇ ಎಂಬ ಅನುಮಾನ ಮೂಡಿದೆ. ಎಷ್ಟೇ ಬೋಗಿ ಹಾಕಿದರೂ ಕೂಡಾ ರೈಲಿನ ಬೇಡಿಕೆ ಕಡಿಮೆಯಾಗದು ಮತ್ತು ಹೊಸ ರೈಲೇ ಈ ಸಮಸ್ಯೆಗೆ ಪರಿಹಾರವಾಗಿದೆ. ಹಾಗು ಘಾಟ್ ಸಮಸ್ಯೆ ಪರಿಹಾರವಾದರೆ ಎಲ್ಲಾ ರೈಲುಗಳೂ ಹೆಚ್ಚು ಬೋಗಿ ಹೊಂದ ಬಹುದಾಗಿದ್ದು ಈ ಸಮಸ್ಯೆ ಪರಿಹಾರ ಮಾಡದೇ ಪಂಚಗಂಗಾ ರೈಲಿನ ಸಮಯ ಹಾಳು ಮಾಡಿದರೆ ತೀವ್ರ ಪ್ರತಿಭಟನೆ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.