ಬಂಟ್ವಾಳ,ಜ 27 (DaijiworldNews/MS): ಶಿಕ್ಷಕಿಯೊಬ್ಬರು ತನ್ನ ಸಹೋದ್ಯೋಗಿಯ ಜತೆಗೆ ಸೇರಿಕೊಂಡು ಪತಿಯ ಮೇಲೆ ಕಾರು ಹತ್ತಿಸಿ ಕೊಲೆಯತ್ನ ನಡೆಸಿರುವ ಘಟನೆಯು ಬಂಟ್ವಾಳ ಪಾಣಿಮಂಗಳೂರಿನ ಮೆಲ್ಕಾರಿನಲ್ಲಿ ನಡೆದಿದ್ದು, ಪತಿಯು ಎದೆನೋವಿ ನಿಂದಾಗಿ ಆಸ್ಪತ್ರೆ ಸೇರಿದ್ದಾರೆ.
ಜ.23ರಂದು ಈ ಘಟನೆ ನಡೆದಿದ್ದು ಪತ್ರಿಕೆಯೊಂದರಲ್ಲಿ ಛಾಯಾಗ್ರಾಹಕರಾಗಿರುವಂತಹ ಕಿಶೋರ್ ಕುಮಾರ್ ಬೋಳಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಕಿಶೋರ್ ಅವರ ಪತ್ನಿ ಶಿಕ್ಷಕಿ ಶುಭಾ ಮತ್ತು ಶಿಕ್ಷಕ ಶಿವಪ್ರಸಾದ್ ಶೆಟ್ಟಿ ಎಂಬವರ ಮೇಲೆ ದೂರು ದಾಖಲಾಗಿದೆ.
ಶುಭಾ ಅವರು ಕಿಶೋರ್ ಕುಮಾರ್ ಬೋಳಾರ್ ಅವರಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು. ಇದಕ್ಕೆ ಕಿಶೋರ್ ತಡೆಯಾಜ್ಞೆ ತಂದಿದ್ದರು. ಇದೇ ವೇಳೆ ಶುಭಾ ಮೆಲ್ಕಾರಿನ ಸಾರಾ ಆರ್ಕೆಡ್ನಲ್ಲಿರುವ ಮನೆಯನ್ನು ತೆರವುಗೊಳಿಸಬೇಕೆಂದು ದಾವೆ ಹೂಡಿರುವರು. ಇದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಕಿಶೋರ್ ಕುಮಾರ್ ಜ.23ರಂದು ಮೆಲ್ಕಾರಿನಲ್ಲಿರುವ ತನ್ನ ಮನೆಗೆ ಬಂದ ವೇಳೆ ಆರೋಪಿಗಳಾದ ಶುಭಾ, ಶಿವಪ್ರಸಾದ್ ಶೆಟ್ಟಿ ಹಾಗೂ ಇತರ ಇಬ್ಬರು ರೌಡಿಗಳೊಂದಿಗೆ ಬಂದು ಮನೆ ಖಾಲಿ ಮಾಡುವಂತೆ ಧಮ್ಮಿ ಹಾಕಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಇದೇ ವೇಳೆ ಆರೋಪಿ ಶಿವಪ್ರಸಾದ್ ಶೆಟ್ಟಿಯು ತಾನು ಶುಭಾಳನ್ನು ರಿಜಿಸ್ಟರ್ ಮದುವೆಯಾಗಿರುವುದಾಗಿ ಕೂಡ ಹೇಳಿಕೊಂಡಿದ್ದಾನೆ. ಈ ವೇಳೆ ಶುಭಾ ಮನೆಯ ಕೀಲಿಗೈ ತೆಗೆಯುತ್ತಿರುವಂತೆ ಭಾಸವಾದಾಗ ಕಿಶೋರ್ ತಡೆಯಲು ಮುಂದಾದ ವೇಳೆ ಅವರಿಗೆ ಹಲ್ಲೆ ನಡೆಸಲಾಗಿದೆ. ಈ ಘಟನೆ ಬಳಿಕ ಆರೋಪಿಗಳು ಇನ್ನೋವಾ ಕಾರಿನಲ್ಲಿ ಪರಾರಿಯಾಗಲು
ಯತ್ನಿಸಿದ ವೇಳೆ ಕಿಶೋರ್ ತಡೆದಾಗ ಶಿವಪ್ರಸಾದ್, ಕಿಶೋರ್ ಅವರ ಮೇಲೆ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ್ದಾನೆ. ಹಲ್ಲೆ ಮತ್ತು ಕಾರು ಢಿಕ್ಕಿಯ ಆಘಾತದಿಂದ ಕಿಶೋರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದರು. ಮತ್ತೆ ಅವರಿಗೆ ಎದೆನೋವು ಕಾಣಿಸಿಕೊಂಡು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಗೆ ಕಾರಣವೇನು?
ಕಿಶೋರ್ ಅವರು 2008ರಲ್ಲಿ ಶುಭಾ ಅವರನ್ನು ಮದುವೆಯಾಗಿದ್ದರು. ಅವರಿಗೆ ಈಗ 12 ವರ್ಷದ ಹೆಣ್ಣು ಮಗು ಕೂಡ ಇದೆ. ಇವರು ತನ್ನ ಸ್ವಂತ ಹಣದಿಂದ ಮೆಲ್ಕಾರಿನ ಸಾರಾ ಆರ್ಕೆಡ್ನಲ್ಲಿ ವಸತಿ ಗೃಹವೊಂದನ್ನು ಕೂಡ ಖರೀದಿ ಮಾಡಿದ್ದರು. ಪತ್ನಿ ಹಾಗೂ ಮಗಳೊಂದಿಗೆ ಇಲ್ಲೇ ವಾಸವಾಗಿದ್ದ ಅವರಿಗೆ ತನ್ನ ಪತ್ನಿಯ ಮೊಬೈಲ್ಗೆ ಶಿವಪ್ರಸಾದ್ ಶೆಟ್ಟಿ "ಅಕ್ಷೇಪಾರ್ಹ" ಸಂದೇಶ ಕಳುಹಿಸಿದ್ದು ಕಂಡುಬಂದಿದೆ. ಇದನ್ನು ನೋಡಿ ಕಿಶೋರ್ ಆಕ್ಷೇಪಿಸಿದ್ದಾರೆ. ಇದರ ಬಳಿಕ ಕೌಟುಂಬಿಕ ಕಲಹ ಆರಂಭವಾಗಿದೆ. ಕಿಶೋರ್ ಅವರ ಪತ್ನಿ ಶುಭಾ ಮೇ 13, 2021ರಂದು ತವರು ಮನೆಗೆ ಹೋಗಿದ್ದು, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕಿಶೋರ್ ಇದಕ್ಕೆ ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರು. ಮೆಲ್ಕಾರ್ನ ವಸತಿ ಗೃಹವನ್ನು ತೆರವುಗೊಳಿಸಬೇಕೆಂದು ಶುಭಾ ದಾವೆ ಹೂಡಿದ್ದರು. ಈ ಪ್ರಕರಣವು ವಿಚಾರಣೆಯಲ್ಲಿದೆ. ಇದೆರಡರ ಹಿನ್ನೆಲೆಯಲ್ಲಿ ಶುಭಾ ಮತ್ತು ಶಿವಪ್ರಸಾದ್ ಜೀವಬೆದರಿಕೆ ಹಾಕಿದ್ದರು ಎನ್ನಲಾಗಿದೆ