ಉಡುಪಿ , ಜ 26 (DaijiworldNews/AK): ಮುಂದಿನ ಲೋಕಸಭಾ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೀನುಗಾರ ಸಮಾಜದ ನಾಯಕ ಪ್ರಮೋದ್ ಮಧ್ವರಾಜ್ ಅವರನ್ನು ಆಯ್ಕೆ ಮಾಡಬೇಕು ಎಂದು ಅಖಿಲ ಭಾರತೀಯ ಮೀನುಗಾರರ ಸಂಘ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅಖಿಲ ಭಾರತೀಯ ಮೀನುಗಾರರ ಸಂಘದ ಕಾರ್ಯದರ್ಶಿ ಕಿಶೋರ್ ಡಿ. ಸುವರ್ಣ, ಪ್ರಮೋದ್ ಮಧ್ವರಾಜ್ ಅವರು ರಾಜಕೀಯ ಹಿನ್ನೆಲೆ ಉಳ್ಳವರಾಗಿದ್ದು, 12 ವರ್ಷಗಳಿಂದ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ, 12 ವರ್ಷಗಳಿಂದ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 6 ವರ್ಷಗಳಿಂದ ರಾಷ್ಟ್ರೀಯ ಮೀನುಗಾರರ ವೇದಿಕೆಯ ಕಾರ್ಯದರ್ಶಿಯಾಗಿ ಸಾರ್ವಜನಿಕ ಸೇವೆಯಲ್ಲಿ ಸಮಾಜದ ಹಿತಾಸಕ್ತಿಗಳ ಬಗ್ಗೆ ಪರಿಣಾಮಕಾರಿಯಾಗಿ ಪ್ರತಿನಿಧಿಸಿ ಬೆಳವಣಿಗೆಗೆ ಮತ್ತು ಸಾಮಾಜಿಕ ಆರ್ಥಿಕ ಪ್ರಗತಿಗೆ ಭವಿಷ್ಯದ ಯೋಜನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೊಂಡಿರುವ ಮೀನುಗಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ನಮ್ಮ ಸದುದ್ದೇಶವನ್ನು ಸಮರ್ಥಿಸುವ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮೀನುಗಾರರ ಸಮಸ್ಯೆಗಳ ನಿವಾರಣೆ ಮತ್ತು ಮೀನುಗಾರಿಕೆಯ ಸರ್ವಾಂಗೀಣ ಅಭಿವೃದ್ಧಿಗೆ ಮೀನುಗಾರರ ಪ್ರತಿನಿಧಿಯನ್ನು ಹೊಂದುವುದು ಬಹಳ ಮುಖ್ಯ ಎಂದರು.
ಪ್ರಸ್ತುತ ಸಂಸದೆ ಶೋಭಾ ಕರಂದ್ಲಾಾಜೆ ಅವರು ರಾಜ್ಯ ಮಟ್ಟದ ನಾಯಕರು. ಅವರು ರಾಜ್ಯದ ಯಾವ ಕ್ಷೇತ್ರದಲ್ಲಿಯೂ ಚುನಾವಣೆಗೆ ಸ್ಪರ್ಧಿಸಬಹುದು. ನಾವು ರಾಜ್ಯದಲ್ಲಿ ಒಂದು ಕ್ಷೇತ್ರವನ್ನು ಮಾತ್ರ ಕೇಳುತ್ತಿದ್ದೇವೆ. ಹೀಗಾಗಿ ಶೋಭಾ ಕರಂದ್ಲಾಾಜೆ ಅವರು ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ನಮ್ಮೆಲ್ಲ ಬೇಡಿಕೆಗೆ ಸ್ಪಂದಿಸಿ ತ್ಯಾಗ ಮಾಡಬೇಕು ಎಂದು ಆಗ್ರಹಿಸಿದರು.
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಆದಿ ಉಡುಪಿ-ಮಲ್ಪೆಯ 3.5 ಕಿ.ಮೀ.ರಾ.ಹೆ.ಯಲ್ಲಿ ಸ್ವಾಾಧೀನಪಡಿಸಿಕೊಂಡಿರುವ ಭೂಮಿಗೆ ಸೂಕ್ತ ಪರಿಹಾರ ನೀಡಬೇಕು. ಜಿಲ್ಲೆಗೆ ಏರ್ಪೋರ್ಟ್ ನಿರ್ಮಾಣ, ಉಡುಪಿ-ಚಿಕ್ಕಮಗಳೂರನ್ನು ಆಕರ್ಷಕ ಪ್ರವಾಸಿ ತಾಣವನ್ನಾಗಿಸುವುದು, ಮಲ್ಪೆ-ಇಂದ್ರಾಳಿ ಗೂಡ್ಸ್ ರೈಲ್ವೇ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು, ರಾಜ್ಯದ ಹೀನ ಸ್ಥಿತಿಯಲ್ಲಿರುವ 14 ಕನ್ಸ್ಯೂಮರ್ ಮೀನುಗಾರರ ಡೀಸೆಲ್ ಮಾರಾಟ ಸೊಸೈಟಿಗಳ ಸಮಸ್ಯೆಗಳನ್ನು ಬಗೆಹರಿಸುವುದು, ಅಂತರ್ರಾಜ್ಯ ಮೀನುಗಾರರಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಏಕರೂಪ ಕಾನೂನು ಜಾರಿಯಾಗಲು ಸಮನ್ವಯ ಸಮಿತಿ ರಚಿಸುವುದು ಸಹಿತ ಹಲವಾರು ಬೇಡಿಕೆಗಳಿದ್ದು, ಇವುಗಳು ಈಡೇರಬೇಕಿದ್ದರೆ ಸ್ಥಳೀಯವಾಗಿ ಮಾಹಿತಿ ಇರುವ ಪ್ರಮೋದ್ ಮಧ್ವರಾಜ್ ಅವರಿಂದ ಮಾತ್ರ ಸಾಧ್ಯ ಎಂದರು.
ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಅಖಿಲ ಕರ್ನಾಟಕ ಮೀನುಗಾರರ ಕ್ರಿಯಾಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಕಡೆಕಾರ್, ಮಲ್ಪೆ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಅಮೀನ್, ಅಖಿಲ ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಸುವರ್ಣ, ಮಲ್ಪೆ ಆಳ ಸಮುದ್ರ ಮೀನುಗಾರರ ಸಂಘದ ಅಧ್ಯಕ್ಷ ಸುಭಾಷ್ ಎಸ್.ಮೆಂಡನ್, ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, 370 ಟ್ರಾಾಲ್ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಕುಂದರ್, ಆಳಸಮುದ್ರ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಸಾಮಾಜಿಕ ಕಾರ್ಯಕರ್ತ ಯೋಗೀಶ್ ಸಾಲ್ಯಾಾನ್ ಪತ್ರಿಕಾಗೋಷ್ಠಿಯಲ್ಲಿದ್ದರು.