ಮಂಗಳೂರು, ಜ 26 (DaijiworldNews/AA): ಕಳೆದೆರಡು ವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದ ಮಲ್ಲಿಕಟ್ಟೆ ಸಾರ್ವಜನಿಕ ಗ್ರಂಥಾಲಯವು ಇದೀಗ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ.
ಮಂಗಳೂರು ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ವ್ಯಾಪ್ತಿಯಲ್ಲಿ ಇರುವ ಕದ್ರಿ ಸರ್ಕಾರಿ ಸಾರ್ವಜನಿಕ ಗ್ರಂಥಾಲಯವು ಪುಸ್ತಕಗಳ ದೊಡ್ಡ ಸಂಗ್ರಹವನ್ನು ಅತಿ ಹೆಚ್ಚು ಓದುಗರನ್ನು ಹೊಂದಿತ್ತು. ಆದರೆ ಗ್ರಂಥಾಲಯದ ಸುತ್ತಮುತ್ತಲಿನ ಪರಿಸರ ಕೊಳಚೆ ಪ್ರದೇಶದಂತೆ ಮಾರ್ಪಟ್ಟಿತ್ತು. ಜೊತೆಗೆ ಗ್ರಂಥಾಲಯದ ಕಟ್ಟಡ ದೀರ್ಘಕಾಲದವರೆಗೆ ಅಭಿವೃದ್ಧಿ ಕಾಣದೆ ದುರಸ್ತಿ ಹಂತದಲ್ಲಿ ಇತ್ತು. ಆದ್ದರಿಂದ ಓದುಗರು ಗ್ರಂಥಾಲಯದತ್ತ ಹೆಜ್ಜೆ ಹಾಕಲು ಹಿಂದೇಟು ಹಾಕುತ್ತಿದ್ದರು.
ಕುಡುಕರು, ಭಿಕ್ಷುಕರು ಹಾಗೂ ನಿರ್ಗತಿಕರಿಂದ ಗ್ರಂಥಾಲಯದ ಸುತ್ತಮುತ್ತಲಿನ ಪರಿಸರ ಕೊಳಚೆ ಪ್ರದೇಶದಂತೆ ಮಾರ್ಪಟ್ಟು, ಜನ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಒದಗಿತ್ತು. ಈ ಪಾರ್ಕ್ ಮದ್ಯದ ಬಾಟಲಿಗಳು, ಟೆಟ್ರಾ ಪ್ಯಾಕ್ ಗಳು ಮತ್ತು ಇತರ ತ್ಯಾಜ್ಯಗಳಿಂದ ತುಂಬಿಹೋಗಿತ್ತು. ಪಾರ್ಕ್ ಗೆ ಬರುವ ಜನರಿಗೆ ಹಾಗೂ ಗ್ರಂಥಾಲಕ್ಕೆ ಬರುವ ಓದುಗರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಲೈಬ್ರರಿ-ಕಮ್-ಪಾರ್ಕ್ ಅನ್ನು ಅಭಿವೃದ್ಧಿ ಪಡಿಸಬೇಕು ಎನ್ನುವುದು ಸಾರ್ವಜನಿಕರ ಬಹುಕಾಲದ ಬೇಡಿಕೆಯಾಗಿತ್ತು.
ಗ್ರಂಥಾಲಯಕ್ಕೆ ಓದುಗರು ಭೇಟಿ ನೀಡುವಾಗಲೆಲ್ಲ ಗ್ರಂಥಾಲಯದ ಸುತ್ತಮುತ್ತಲಿನ ಜಾಗ ಸ್ವಚ್ಛವಾಗಿರಬೇಕು ಹಾಗೇ ಅಚ್ಚುಕಟ್ಟಾಗಿರಬೇಕು ಎಂದು ಬಯಸುತ್ತಾರೆ. ಜೊತೆಗೆ ಈ ಜಾಗದಲ್ಲಿ ಬಹಳ ಸಮಯ ಕಳೆಯಬೇಕೆಂದುಕೊಳ್ಳುತ್ತಾರೆ. 14, 15ನೇ ಹಣಕಾಸು ಯೋಜನೆಯಡಿ ಸುಮಾರು 70 ಲಕ್ಷ ವೆಚ್ಚದಲ್ಲಿ ಮುಡಾವು ಕೈಗೆತ್ತಿಕೊಂಡ ಈ ಯೋಜನೆಯಡಿ ಲೈಬ್ರರಿ-ಕಮ್-ಪಾರ್ಕ್ ಆಗಿ ರೂಪುಗೊಳ್ಳಲು ಎರಡು ವರ್ಷಗಳನ್ನು ತೆಗೆದುಕೊಂಡಿತು.
ಇದೀಗ ಲೈಬ್ರರಿ-ಕಮ್-ಪಾರ್ಕ್ ನ ರೂಪ ಸಂಪೂರ್ಣವಾಗಿ ಬದಲಾಗಿದೆ. ಗ್ರಂಥಾಲಯ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿಯುವ ಮೂಲಕ ಎರಡು ವರ್ಷಗಳ ಹಿಂದೆ ಕಾಣಿಸುತ್ತಿದ್ದ ಗ್ರಂಥಾಲಯವೇ ಅಲ್ಲ ಎಂಬಂತೆ ರೂಪಾಂತರಗೊಂಡಿದೆ. ಜೊತೆಗೆ ಗ್ರಂಥಾಲಯದ ಮುಂಭಾಗದಲ್ಲಿ ಖ್ಯಾತ ಸ್ಯಾಕ್ಸ್ ಪೋನ್ ಕಲಾವಿದ ಕದ್ರಿ ಗೋಪಾಲನಾಥ್ ಅವರ ಭಾವ ಚಿತ್ರ ಮತ್ತು ಲೈವ್ ಸ್ಯಾಕ್ಸೋ ಪೋನ್ ಇರಿಸಲಾಗಿದೆ. ಪಾರ್ಕ್ ನಲ್ಲಿ ಮಾಡಲಾದ ವಿದ್ಯುತ್ ದೀಪಗಳ ವ್ಯವಸ್ಥೆಯು ರಾತ್ರಿಯ ಹೊತ್ತಿನಲ್ಲಿ ಹೆಚ್ಚು ಆಕರ್ಷಿಸುತ್ತದೆ. ಶಿಥಿಲಾವಸ್ಥೆಯಲ್ಲಿದ್ದ ಮಲ್ಲಿಕಟ್ಟೆ ಲೈಬ್ರರಿ-ಕಮ್-ಪಾರ್ಕ್ ಇದೀಗ ಜನರನ್ನು ತನ್ನತ್ತ ಸೆಳೆಯುತ್ತಿದೆ. ಇಂದು ಮಲ್ಲಿಕಟ್ಟೆ ಲೈಬ್ರರಿ-ಕಮ್-ಪಾರ್ಕ್ ಸಂಪೂರ್ಣ ಅಭಿವೃದ್ಧಿ ಕಂಡಿದ್ದು, ಹೆಚ್ಚು ಓದುಗರನ್ನು ತನ್ನತ್ತ ಸೆಳೆಯುವುದರ ಜೊತೆಗೆ ಓದುಗರಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ.
ಸ್ಯಾಕ್ಸೋಫೋನ್ ವಾದಕ ದಿವಂಗತ ಕದ್ರಿ ಗೋಪಾಲನಾಥ್ ಅವರ ಗೌರವಾರ್ಥ ಈ ಉದ್ಯಾನವನವನ್ನು ಸ್ಮಾರಕವನ್ನಾಗಿ ಪರಿವರ್ತಿಸಲು ನಾವು ನಿಗಮ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಶೀಘ್ರದಲ್ಲೇ ನಮ್ಮ ಪ್ರಸ್ತಾವನೆಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ಮುಂಬರುವ ದಿನಗಳಲ್ಲಿ ಅಕ್ಯುಪಂಕ್ಚರ್ ಟ್ರ್ಯಾಕ್ ಕೂಡ ನಿರ್ಮಾಣ ಮಾಡಲಾಗುತ್ತದೆ. ಕಾರ್ಪೊರೇಟರ್ ಕಾವ್ಯಾ ನಟರಾಜ್, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ್ ಕಾಮತ್ ಅವರ ಬೆಂಬಲದಿಂದ ಮಲ್ಲಿಕಟ್ಟೆ ಲೈಬ್ರರಿ-ಕಮ್-ಪಾರ್ಕ್ ಇಷ್ಟೊಂದು ರೂಪಾಂತರಗೊಳ್ಳಲು ಹಾಗೂ ಅಭಿವೃದ್ಧಿ ಕಾಣಲು ಸಾಧ್ಯವಾಯಿತು ಎಂದು ಕಾರ್ಪೋರೇಟರ್ ಮನೋಹರ್ ಶೆಟ್ಟಿ ಹೇಳಿದ್ದಾರೆ.
ಈ ಹಿಂದೆ ಮದ್ಯ ಸೇವಿಸುವವರಿಂದ ಗ್ರಂಥಾಲಯ ಹಾಗೂ ಪಾರ್ಕ್ ನ ಸ್ಥಿತಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಅಧಿಕಾರಿಗಳ ಪ್ರಯತ್ನದಿಂದ ಮಲ್ಲಿಕಟ್ಟೆ ಗ್ರಂಥಾಲಯದ ಸಂಪೂರ್ಣ ರೂಪ ಬದಲಾಗಿದೆ. ಈ ರೂಪಾಂತರದಿಂದ ಗ್ರಂಥಾಲಯವು ಹೆಚ್ಚು ಓದುಗರನ್ನು ತನ್ನತ್ತ ಆಕರ್ಷಿಸುತ್ತದೆ ಎಂದು ಓದುಗರೊಬ್ಬರು ತಿಳಿಸಿದ್ದಾರೆ.