ಮಲ್ಪೆ, ಏ 23 (Daijiworld News/MSP): ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಆಳಸಮುದ್ರ ಬೋಟ್ ಗೋವಾ - ಮಲ್ವಾನ್ ಸಮೀಪ ಸಮೀಪ ಸಮುದ್ರ ವ್ಯಾಪ್ತಿಯಲ್ಲಿ ಏ.23ರ ಮಂಗಳವಾರ ಮಧ್ಯಾಹ್ನ ಮುಳುಗಡೆಯಾಗಿದೆ.
ಮಲ್ಪೆಯ ರೋಶಿನಿ ಎಸ್.ಕುಂದರ್ ಅವರಿಗೆ ಸೇರಿದ ಶ್ರೀ ಸಾಯಿಸಿದ್ದಿ ಎಂಬ ಆಳಸಮುದ್ರ ಮುಳುಗಡೆಯಾಗಿದ್ದು ಬೋಟ್ನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮಂಜು, ರಾಮ, ಸದಾಶಿವ, ನಾಗರಾಜ್, ಹೊನ್ನಪ್ಪ ಗಣಪತಿ, ಪಾಂಡು ರಕ್ಷಿಸಲ್ಪಟ್ಟವರು. ಏ.೧೬ ರಂದು ರಾತ್ರಿ ಮಲ್ಪೆ ಬಂದರಿನಿಂದ ತೆರಳಿದ ಬೋಟ್ ಗೋವಾ ಮಾಲ್ವಾನ್ ಸಮೀಪ ಸುಮಾರು ೪೦ ಮೀ. ಅಳದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್ನ ತಳಭಾಗಕ್ಕೆ ವಸ್ತುವೊಂದು ಬಡಿದು ಬೋಟ್ಗೆ ಹಾನಿಯಾಗಿ ಬೋಟ್ ಒಳಗೆ ನೀರು ನುಗ್ಗಿ ಇಂಜಿನ್ ಸ್ಥಗಿತಗೊಂಡಿದೆ. ಅವಘಡ ವೇಳೆ ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಶುಭಾಶಯ, ವಾಯುಪುತ್ರ ಎಂಬ ಬೋಟುಗಳಲ್ಲಿದ್ದ ಮೀನುಗಾರರು, ಅಪಾಯಕ್ಕೆ ಸಿಲುಕಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.
ಅವಘಡಕ್ಕೀಡಾದ ಬೋಟನ್ನು ರೋಪ್ ಸಹಾಯದಿಂದ ಎಳೆದುಕೊಂಡು ಬರಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬೋಟ್ನಲ್ಲಿದ್ದ 8 ಸಾವಿರ ಲೀಟರ್ ಡೀಸೆಲ್, ಮೀನು ಹಿಡಿಯುವ ಬಲೆ, ಇತರೆ ತಾಂತ್ರಿಕ ಪರಿಕರಗಳು, ಹಿಡಿದ ಮೀನು ಸೇರಿದಂತೆ ಒಟ್ಟು 80 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.