ಪಡುಬಿದ್ರಿ, ನ15: ಲಾಕ್ಔಟ್ ಘೋಷಿಸಿದ ಪಡುಬಿದ್ರಿ ಪವನ ಯಂತ್ರ ತಯಾರಿಕಾ ಘಟಕ ಸುಜ್ಲಾನ್ ವಿಂಡ್ ಮಿಲ್ ಘಟಕದ ಗೇಟ್ ಎದುರು ಇಂಟಕ್ ನೇತೃತ್ವದಲ್ಲಿ ಕಾರ್ಮಿಕರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕಾರ್ಮಿಕರು ಹೇಳಿದ್ದು, ಕಂಪನಿ ಶೀಘ್ರ ಪುನರಾರಂಭಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭ ಪ್ರತಿಭಟನೆಯಲ್ಲಿ ಭಾಗಿಯಾದ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಾತನಾಡಿ, ಕಂಪನಿಗೆ ನೈಜ ತೊಂದರೆಯಾಗಿದ್ದರೆ ಅದಕ್ಕೆ ಕಾರ್ಮಿಕರಷ್ಟೇ ಆಡಳಿತ ವರ್ಗವೂ ಕಾರಣವಾಗುತ್ತದೆ. ಕೇವಲ ಕಾರ್ಮಿಕರ ಮೇಲೆ ಗೂಬೆ ಕೂರಿಸುವಂತಿಲ್ಲ. ಆಡಳಿತ ವರ್ಗ ಕಾರ್ಮಿಕರ ಮೇಲೆ ನಡೆಸುವ ಯಾವುದೇ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲಿದ್ದೇವೆ. ಪ್ರಸ್ತುತ ಘಟಕ ಶೀಘ್ರ ಆರಂಭಗೊಳ್ಳಬೇಕು. ಕಂಪನಿ ಕಾರ್ಮಿಕರೊಂದಿಗೆ ಸಹಕರಿಸಿದರೆ ನಾವೂ ಸಹಕರಿಸುತ್ತೇವೆ. ಇಲ್ಲದಿದ್ದರೆ ಉಗ್ರ ಹೋರಾಟಕ್ಕೂ ಸಿದ್ಧರಿದ್ದೇವೆ. ಕಂಪನಿಗೆ ಯಾವುದು ಬೇಕೆಂದು ಅವರೇ ನಿರ್ಧರಿಸಲಿ. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕಾರ್ಮಿಕರು ಹಾಗೂ ವಿವಿಧ ಸಂಘಟನೆಗಳ ಮೂಲಕ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಕಂಪನಿಯ ಯಾವ ಬೆದರಿಕೆಗೂ ಜಗ್ಗದಿರಿ. ಅವರ ಕೇಸ್ಗಳಿಗೆ ಬೆದರದಿರಿ ಎಂದು ಕಾರ್ಮಿಕರಿಗೆ ಸಾಂತ್ವನ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಇಂಟೆಕ್ ಅಧ್ಯಕ್ಷ ಮನೋಹರ ಶೆಟ್ಟಿ ಮಾತನಾಡಿ, ಸುಜ್ಲಾನ್ ಕಂಪನಿಯು ಸರಕಾರದ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಕಾರ್ಮಿಕರಿಗೆ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ. ಎಸ್ಇಝಡ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸೂಕ್ತ ಸುರಕ್ಷತೆಯನ್ನೂ ಅಳವಡಿಸಿಲ್ಲ. ಅಪಾಯಕಾರಿ ಕೆಮಿಕಲ್ಗಳನ್ನು ಬೇಕಾಬಿಟ್ಟಿ ಉಪಯೋಗಿಸಿದ ಪರಿಣಾಮ ಯಾವುದೇ ಸಂದರ್ಭ ಅಪಾಯ ಎದುರಾಗಬಹುದು. ಕಾರ್ಮಿಕರನ್ನು ಹೆದರಿಸಿ, ಬೆದರಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಯಾರಿಗೂ ಒಳ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಒಳಗೆ ಏನಾಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ. ಜಿಲ್ಲಾಡಳಿತ ಹಾಗೂ ಸಂಬಂದಿತ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.ಕಂಪನಿ ಪುನರಾರಂಭಗೊಳ್ಳುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
ಇಂಟಕ್ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಕೋಟ್ಯಾನ್ ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಕಂಪನಿ ಪುನರಾರಂಭಕ್ಕೆ ಯಾವುದೇ ಮಾತುಕತೆ, ಸಂಧಾನಕ್ಕೆ ಸಿದ್ಧ. ಕಾರ್ಮಿಕರಿಗೆ ಯಾವುದೇ ತಂದರೆಯಾಗದಂತೆ ಪುನರಾಂಭಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟಕ್ಕೆ ಸಿದ್ಧರಿದ್ದೇವೆ. ಈಗ ಹಗಲು ಮಾತ್ರ ಪ್ರತಿಭಟನೆ ನಡೆಯಲಿದ್ದು,ಸೂಕ್ತ ಪ್ರತಿಸ್ಪಂದನೆ ದೊರೆಯದಿದ್ದಲ್ಲಿ ಅಹರ್ನಿಶಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.
ಕಂಪನಿಯ ಆಡಳಿತ ವರ್ಗದ ದಕ್ಷಿಣಮೂರ್ತಿ, ಪಿಲಿಫ್, ಅರುಣ್ ಮತ್ತು ಸುರೇಶ್ ಎಂಬವರ ವಿರುದ್ಧ ಘೋಷಣೆ ಕೂಗಿದ ಧರಣಿ ನಿರತರು, ನ್ಯಾಯ ಸಿಗುವವರೆಗೆ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಅನಾಹುತಗಳಿಗೆ ಕಂಪನಿ ಸ್ಪಂದಿಸುತ್ತಿಲ್ಲ-ಕಾರ್ಮಿಕರ ಆರೋಪ: ಕೆಲಸ ಮಾಡುವಾಗ ಕೆಮಿಕಲ್ ಬಿದ್ದು ಕಣ್ಣು ಕಳಕೊಂಡ ಚೇತನ್ ಹಾಸನ ಎಂಬವರಿಗೆ ಎರಡೂವರೆ ಲಕ್ಷ ರೂ. ಖರ್ಚಾಗಿದ್ದು, ಕಂಪನಿಯಿಂದ ಕೇವಲ 80 ಸಾವಿರ ವೈದ್ಯಕೀಯ ಸೌಲಭ್ಯ ನೀಡಲಾಗಿದೆ. 4 ಕೈಬೆರಳು ಕಳಕೊಂಡ ಸಂದೀಪ್ ಪುತ್ತೂರುರವರಿಗೆ ಯಾವುದೇ ನೆರವು ನೀಡಲಾಗಿಲ್ಲ. ಅಲ್ಲದೆ ಮತ್ತೆ ಅಧೆ ಕೆಲಸಕ್ಕೆ ಒತ್ತಡ ಹೇರುತ್ತಿದ್ದಾರೆ. ಕಂಪನಿ ಒಳಗೆ ಬೈಕ್ ಅಪಘಾತಕ್ಕೀಡಾದ ಪಲಿಮಾರಿನ ಪ್ರದೀಪ್ ಎಂಬರಿಗೆ ಯಾವುದೇ ಸಹಾಯ ನೀಡಲಾಗಿಲ್ಲ. ಎರಡು ಬೆರಳು ಕಳಕೊಂಡ ಪಶ್ಚಿಮ ಬಂಗಾಳದ ಆನಂದ ಚೌಧರಿಗೂ ಯಾವುದೇ ನೆರವು ನೀಡಿಲ್ಲ ಎಂದು ಕಾರ್ಮಿಕರನೇಕರು ಪತ್ರಕರ್ತರ ಮುಂದೆ ಅಳಲು ತೋಡಿಕೊಂಡರು.
10 ವರ್ಷದಿಂದ ಸುಜ್ಲಾನ್ನಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಮೂಲ್ಕಿ ಕಾರ್ನಾಡಿನ ಜೀವನ್ ಎಂಬವರು ಕೆಲಸದ ಭರವಸೆ ಮೇಲೆ ಮದುವೆಗಾಗಿ 2 ಲಕ್ಷ ರೂ. ಸಾಲ ಮಾಡಿದ್ದು, ಸಂಬಳದಿಂದ ಪ್ರತಿ ತಿಂಗಳು 6 ಸಾವಿರ ರೂ.ಕಡಿತವಾಗುತ್ತಿತ್ತು. ಈಗ ಲಾಕ್ಔಟ್ನಿಂದ ತೀವ್ರ ಆರ್ಥಿಕ ಸಮಸ್ಯೆ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬಳ್ಳಾರಿಯ ಜಗದೀಶ್, ಬಿಜಾಪುರದ ವೀರಪ್ಪ, ಪಕ್ಷಿಕೆರೆಯ ಉಮೇಶ್ ಎಂಬವರು ಮದುವೆಗಾಗಿ ಮತ್ತು ಕೌಟಂಬಿಕ ಸಮಸ್ಯೆಗಾಗಿ ವಿಪರೀತ ಸಾಲ ಮಾಡಿಕೊಂಡಿದ್ದು,ಕುಟುಂಬ ನಿರ್ವಹಣೆ ಅಸಾಧ್ಯವಾಗಿದೆ ಎಂದಿದ್ದಾರೆ. ಕಷ್ಟಪಟ್ಟು ಸಿಕ್ಕಿದ ಕೆಲಸದ ಭರವಸೆ ಮೇಲೆ ಸಾಲ ಮಾಡಿ ಸಿಕ್ಕಿ ಹಾಕಿಕೊಂಡಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಕಾರ್ಮಿಕರಲ್ಲಿ ಶೇ 65ರಷ್ಟು ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳವರು.ಅವಿಭಜಿತ ದಕ ಜಿಲ್ಲೆಯವರು ಶೇ.35 ಮಂದಿ ಮಾತ್ರ.ಸ್ಥಳೀಯರಿಗೆ ಶೇ.50 ರಷ್ಟು ಉದ್ಯೋಗ ನೀಡಿದ್ದೇವೆ ಎಂದವರು ಸುಳ್ಳು ಹೇಳಿದ್ದಾರೆಂದು ಕೆಲವರು ಆರೋಪಿಸಿದ್ದಾರೆ.
ಕಂಪನಿಯಲ್ಲಿ ಕೆಲಸ ಮಾಡುವಾಗ ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸಿಲ್ಲ. ಅನೇಕರು ಕೆಮ್ಮು, ಅಸ್ತಮಾ, ಮೈಕೈ ತುರಿಕೆಗಳಿಂದ ಬಳಲುತ್ತಿದ್ದು, ಈ ಬಗ್ಗೆ ಸೂಕ್ರ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಇಂಟಕ್ ದಕ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ, ಉಭಯ ಜಿಲ್ಲಾ ಉಪಾಧ್ಯಕ್ಷರುಗಳಾದ ಧೀರಜ್ ಹುಸೈನ್ ಮತ್ತು ಸ್ಟೀವನ್ ಡಿಸೋಜಾ, ಮುಖಂಡರುಗಳಾದ ದೀಪಕ್ ಎರ್ಮಾಳ್, ದಿನೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಗುರುವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಎಸ್ಇಝಡ್ ಕಮೀಷನರ್ ಜತೆ ಹಾಗೂ ವಿವಿಧ ಮುಖಂಡರ ಜತೆ ಸಮಾಲೋಚನಾ ಸಭೆ ನಡೆಯಲಿದ್ದು, ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.