ಕುಂದಾಪುರ, ಜ 26 (DaijiworldNews/HR): ಕುಂದಾಪುರ ಕೊಂಕಣಿ ಸಮಾಜದವರ 2 ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ವಿದ್ಯಾರಂಗ ಮಿತ್ರ ಮಂಡಳಿಯ ಅಧ್ಯಕ್ಷ, ಪದಾಧಿಕಾರಿಗಳ ಮೇಲೆ ನಿರಂತರವಾಗಿ ಸುಳ್ಳು ಕೇಸು ದಾಖಲಿಸಿ ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಖಾರ್ವಿ ಸಮಾಜದಿಂದ ಗುರುವಾರದಂದು ಕುಂದಾಪುರ ಸಹಾಯಕ ಕಮಿಷನರ್ ಮೂಲಕ ಗೃಹಸಚಿವರಿಗೆ ಮನವಿ ನೀಡಲಾಯಿತು.
ಕುಂದಾಪುರದ ಕೊಂಕಣಿ ಖಾರ್ವಿ ಸಮುದಾಯದವರ ಮೀನುಗಾರಿಕೆ ವೃತ್ತಿಯನ್ನು ಜೀವನಪಯೋಗಕ್ಕೆ ನಡೆಸಿಕೊಂಡು ಬಂದಿದ್ದು ನಮ್ಮೆಲ್ಲರ ಆರಾಧ್ಯ ದೇವತೆ ಶ್ರೀ ಮಹಾಕಾಳಿ ಮಾತೆಯು ಶಕ್ತಿ ದೇವತೆ ಅಂತಲೇ ಪ್ರತೀತಿ. ಸಮಾಜದ ಅಭಿವೃದ್ಧಿಯಲ್ಲಿ ಶ್ರೀ ದೇವಸ್ಥಾನ ಆಡಳಿತ ಮಂಡಳಿಯ ನಿರಂತರ ಪರಿಶ್ರಮವಿದೆ. ಧಾರ್ಮಿಕವಾದ ಯಾವುದೇ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಹಾಗೆಯೇ ಕಳೆದ 54 ವರ್ಷಗಳಿಂದ ಶೈಕ್ಷಣಿಕವಾಗಿ ಸಮಾಜಿಕವಾಗಿ ಸಮಾಜ ಸುಧಾರಣೆಯಂತಹ ಮಹಾತ್ಕಾರ್ಯವನ್ನು ವಿದ್ಯಾರಂಗ ಮತ್ತು ಮಂಡಳಿಯು ನಡೆಸಿಕೊಂಡು ಬಂದಿದ್ದು ಇಂದಿಗೂ ನಡೆಯುತ್ತಿದೆ. ಈತನ್ಮದ್ಯೆ ಮೂವರು ವ್ಯಕ್ತಿಗಳು ಈ ಸುಸ್ಥಿತಿಯಲ್ಲಿ ಸಾಗುತ್ತಿರುವ ಸಮಾಜದ ವ್ಯವಸ್ಥೆಗಳನ್ನು ಬುಡ ಮೇಲು ಮಾಡುತ್ತಿದ್ದಾರೆ. ಇವರು ನೀಡಿರುವ ಎಲ್ಲಾ ಪ್ರಕರಣಗಳು ಸುಳ್ಳು ಪ್ರಕರಣಗಳಾಗಿದ್ದು ಇವರು ಮುಂದಕ್ಕೂ ಕೂಡ ಸಮಾಜದಲ್ಲಿ ಒಡಕು ತರುವಂತಹ ಕೃತ್ಯಗಳನ್ನು ನಡೆಸಬಲ್ಲವರಾಗಿರುವುದರಿಂದ ನಮ್ಮ ಸಮಾಜಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಮುಂದಿನ ದಿನಗಳಲ್ಲಿ ಈ ಮೂವರು ಸಮಾಜದ ಮುಖ್ಯಸ್ಥರ ಮೇಲೆ ಕೇಸು ದಾಖಲಿಸಲು ಬಂದಲ್ಲಿ ಪರಮಾರ್ಶೆ ಮಾಡಬೇಕು. ಅಲ್ಲದೆ ಸಮಾಜದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಪ್ರಕರಣ ದಾಖಲಿಸುವರ ವಿರುದ್ಧ ಕಾನೂನು ರೀತಿಯಲ್ಲಿ ಶಿಕ್ಷಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನದಿಂದ ಮಿನಿವಿಧಾನಸೌಧದ ತನಕ ಮೆರವಣಿಗೆ ಮೂಲಕ ಸಾಗಿಬಂದರು. ಮೀನು ಮಾರುಕಟ್ಟೆ ಹಾಗೂ ಚಿಪ್ಪು ಕೆಲಸ ಬಂದ್ ಮಾಡಲಾಗಿತ್ತು.
ಶ್ರೀ ಮಹಾಕಾಳಿ ದೇವಸ್ಥಾನ ಅಧ್ಯಕ್ಷ ಜಯಾನಂದ ಖಾರ್ವಿ, ಕಾರ್ಯದರ್ಶಿ ಕೇಶವ ಖಾರ್ವಿ, ವಿದ್ಯಾರಂಗ ಮಿತ್ರ ಮಂಡಳಿ ಅಧ್ಯಕ್ಷ ದಾಮೋದರ ಖಾರ್ವಿ, ಮೊಕ್ತೇಸರ ಶಂಕರ ನಾಯ್ಕ, ಪ್ರಮುಖರಾದ ಪ್ರಕಾಶ್ ಖಾರ್ವಿ, ಅರುಣ್ ಖಾರ್ವಿ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ರಾಘವೇಂದ್ರ ಖಾರ್ವಿ ಮೊದಲಾದವರಿದ್ದರು.