ಮಂಗಳೂರು,ಏ 23 (Daijiworld News/MSP): ಈಸ್ಟರ್ ಭಾನುವಾರದಂದು ಶ್ರೀಲಂಕಾವನ್ನೇ ನಡುಗಿಸಿದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದ ಬಳಿಕ ಕರಾವಳಿಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಮಂಗಳೂರಿನಿಂದ ಕಾರವಾರವರೆಗೆ ಗಸ್ತು ನಡೆಸಬೇಕು, ತುರ್ತು ಕಾರ್ಯಾಚರಣೆಗೆ ಸನ್ನದ್ಧವಾಗಿರಬೇಕು, ತೀವ್ರ ನಿಗಾ ವಹಿಸಿರಬೇಕು, ಕಟ್ಟೆಚ್ಚರ ಸ್ಥಿತಿಯಲ್ಲಿರಬೇಕು ಎಂದು ಕರಾವಳಿ ಕಾವಲು ಪೊಲೀಸ್ ಪಡೆಯ ಮುಖ್ಯಸ್ಥ ಡೈರೆಕ್ಟರ್ ಜನರಲ್ ಎ.ಎಂ. ಪ್ರಸಾದ್ ಅವರು ಸೂಚನೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದರಂತೆ ಕರಾವಳಿ ಕಾವಲು ಪಡೆಯ ಪೊಲೀಸರು ಸಮುದ್ರದಲ್ಲಿ ಗಸ್ತು ನಿರತರಾಗಿದ್ದಾರೆ.
ಶ್ರೀಲಂಕಾ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಉಗ್ರ ಸಂಘಟನೆ ಐಸಿಸ್ ಹೊತ್ತುಕೊಂಡಿದೆ. ನ್ಯೂಜಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ಕಳೆದ ತಿಂಗಳು ಎರಡು ಮಸೀದಿಗಳ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಈ ಕೃತ್ಯ ನಡೆಸಲಾಗಿದೆ ಎಂದು ಹೇಳಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಹವಣಿಸುತ್ತಿರುವ ಉಗ್ರ ಸಂಘಟನೆಗಳು, ಉಗ್ರ ಪಡೆಯನ್ನು ದೇಶದೊಳಕ್ಕೆ ನುಗ್ಗಿಸಲು ಸಮುಂದರಿ ಜಿಹಾದ್ ಮೂಲಕ ಪ್ರಯತ್ನಿಸುತ್ತಿದೆ ಎಂದು ಗುಪ್ತಚರ ಇಲಾಖೆ ಕಳೆದ ತಿಂಗಳಷ್ಟೇ ಎಚ್ಚರಿಕೆ ನೀಡಿತ್ತು. ಅನಂತರ ಕಟ್ಟೆಚ್ಚರ ವಹಿಸಿದ್ದ ಕರಾವಳಿ ಕಾವಲು ಪಡೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದೆ.