ಕಾಸರಗೋಡು,ಏ 23 (Daijiworld News/MSP): 3 ನೇ ಹಂತದ ಲೋಕಸಭೆ ಚುನಾವಣೆಯ ಸಂದರ್ಭ ಕಾಸರಗೋಡಿನಲ್ಲಿ ಘರ್ಷಣೆಯಂಟಾಗಿದ್ದು ಚೆರ್ಕಳ ಬಳಿಯ ತೆಕ್ಕಿಲ್ನ ಮತಗಟ್ಟೆಯಲ್ಲಿ ಯುಡಿಎಫ್ ಕಾರ್ಯಕರ್ತನಿಗೆ ಚಾಕುವಿನ ಚುಚ್ಚಲಾಗಿದೆ. ಈ ಸಂದರ್ಭ ಒಟ್ಟು ಮೂವರು ಯುಡಿಎಫ್ ಕಾರ್ಯಕರ್ತರಿಗೆ ಗಾಯಗಳಾಗಿವೆ. ಮತದಾನದ ನಡುವೆ ವಿವಾದ ಉಂಟಾಗಿ ಘರ್ಷಣೆಗೆ ಕಾರಣವಾಯಿತು. ತೆಕ್ಕಿಲ್ನ ಮೊಯ್ದೀನ್ ಕುಟ್ಟಿ ಅವರ ಮಗನಾದ ಜಲೀಲ್ (38) ಇರಿತದಿಂದ ಗಾಯಗೊಂಡವರು. ಅವರನ್ನು ತಕ್ಷಣ ಕಾಸರಗೋಡು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ.
ಕಾಸರಗೋಡು ಬ್ಲಾಕ್ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಡಿ.ಕಬೀರ್ (38), ಅಬ್ದುಲ್ ಖಾದರ್ ಮಲ್ಲಂ ಎಂಬುವರಿಗೂ ಹಲ್ಲೆಯಿಂದ ಗಾಯಗಳಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ತೆಕ್ಕಿಲ್ ಜಿಯುಪಿ ಶಾಲೆಯ ಮತಗಟ್ಟೆಯಲ್ಲಿ ಸಿಪಿಎಂ ಪಕ್ಷದ ಬೆಂಬಲಿಗರು ನಕಲಿ ಮತದಾನ ಮಾಡಲು ಯತ್ನಿಸಿದಾಗ ಯುಡಿಎಫ್ ಏಜೆಂಟ್ ಆದ ಜಲೀಲ್ ಆಕ್ಷೇಪ ಎತ್ತಿರುವುದೇ ಹಲ್ಲೆಗೆ ಕಾರಣ ಎಂದು ಯುಡಿಎಫ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಇದಲ್ಲದೆ ಉದುಮ ವಿಧಾನಸಭಾ ಕ್ಷೇತ್ರದ ಬೇಕಲ ಬಳಿಯ ಕೂಟಕನಿ ಶಾಲೆಯ 132ನೇ ಮತಗಟ್ಟೆಯಲ್ಲಿ ಬಿಜೆಪಿ ಬೂತ್ ಏಜೆಂಟ್ ಸಂದೀಪ್ ಮೇಲೆ ಸಿಪಿಎಂ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ. ಶ್ರೀಕಾಂತ್ ಆರೋಪಿಸಿದ್ದಾರೆ. ಉದುಮ ಶಾಸಕ ಕೆ.ಕುಂಞಿರಾಮನ್ ಅವರ ಮಗ ಪದ್ಮಕುಮಾರ್ ಅವರ ನೇತೃತ್ವದಲ್ಲಿ ಸಿಪಿಎಂ ಕಾರ್ಯಕರ್ತರ ತಂಡ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.