ಕುಂದಾಪುರ, ಜ 25 (DaijiworldNews/HR): ತಾಲೂಕು ಆಡಳಿತ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಗ ಇಲಾಖೆ ಕುಂದಾಪುರ ಇವರ ಸಹಯೋಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ 2024 ಕಾರ್ಯಕ್ರಮವು ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶ್ರೀ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ನಡೆಯಿತು. ಇದಕ್ಕೂ ಮುನ್ನ ಸರ್ಕಾರಿ ಪದವಿ ಪೂರ್ವ ಕಾಲೇಜು, ಕುಂದಾಪುರದಿಂದ ಆರಂಭಗೊಂಡ ಮತದಾರರ ಜಾಗೃತಿ ಅಭಿಯಾನ ಜಾಥಾವು ಮಾಸ್ತಿಕಟ್ಟೆ ರಸ್ತೆ, ಹಳೆಬಸ್ ಸ್ಟ್ಯಾಂಡ್ , ಹೂವಿನ ಮಾರ್ಕೇಟ್ ಮೂಲಕ ಸಾಗಿ ಕಾಲೇಜು ಆವರಣದಲ್ಲಿ ಬಂದು ಸಮಾಪ್ತಿಯಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್ ಮಾತನಾಡಿ, “ನಮ್ಮ ದೇಶದಲ್ಲಿ 18 ವರ್ಷಗಳಿಗಿಂತ ಮೇಲ್ಪಟ್ಟ ಎಲ್ಲರೂ ಮತದಾನದ ಹಕ್ಕನ್ನು ಹೊಮದುತ್ತಾರೆ. ಪ್ರತಿಯೊಬ್ಬ ಮತದಾರನೂ ದೇಶದ ಅಭಿವೃದ್ಧಿ, ದೇಶದ ಪ್ರಗತಿಯ ಹಿತದೃಷ್ಟಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಮತದಾರನೂ ತನ್ನ ವೈಯುಕ್ತಿ ಸ್ವಾರ್ಥವನ್ನು ಬದಿಗಿಟ್ಟು, ದೇಶ ಕಟ್ಟುವ ಪ್ರಾಮಾಣಿಕ ಪ್ರಯತ್ನಕ್ಕೆ ಕೈಜೋಡಿಸಬೇಕು” ಎಂದರು.
ಬಸ್ರೂರು ಶಾರದಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ॥ ವಿಶ್ವನಾಥ ಆಚಾರ್ಯ ಮಾಹಿತಿ ನೀಡಿದರು. ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್. ಆರ್ ಸಭಾಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ರಾಜು ಎನ್., ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಶೃತಿಶ್ರೀ ಎಸ್., ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ. ಯು., ತಾಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ವಿ. ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಬಿ. ಜಿ. ರಾಮಕೃಷ್ಣ, ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಸಹಾಯಕ ಸರ್ಕಾರಿ ಅಭಿಯೋಜಕ ಉದಯಕುಮಾರ್ ಬಿ.ಎ, ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಶ್ರೀನಾಥ ರಾವ್, ತಹಶೀಲ್ದಾರ್ ಶೋಭಾಲಕ್ಷ್ಮೀ ಹೆಚ್. ಎಸ್., ತಹಶೀಲ್ದಾರ್ ಶ್ರೀಕಾಂತ ಎಸ್. ಹೆಗ್ಡೆ ಉಪಸ್ಥಿತರಿದ್ದರು.