ಪುತ್ತೂರು, ಜ 25 (DaijiworldNews/PC): ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಅಕ್ಕನ ಪ್ರಾಣ ಕಾಪಾಡಲು ತಂಗಿ ತನ್ನ ಲಿವರ್ ದಾನ ಮಾಡಿದ್ದು ದುರದೃಷ್ಟವಶಾತ್ ಅಕ್ಕ ಹೃದಯಾಘಾತದಿಂದ ಪ್ರಾಣಬಿಟ್ಟ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.
ಐಶ್ವರ್ಯ(29) ಮೃತ ಯುವತಿ ಎಂದು ಗುರುತಿಸಲಾಗಿದೆ.
ಐಶ್ವರ್ಯ ಅವರಿಗೆ ಜಾಂಡೀಸ್ ಜ್ವರ ಬಾಧಿಸಿದ್ದು, ಮೊದಲು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪರೀಕ್ಷೆ ನಡೆಸಿದ ವೈದ್ಯರು ಅವರ ಲಿವರ್ ಹಾನಿಯಾಗಿದ್ದು, ಲಿವರ್ ಟ್ರಾನ್ಸ್ಪ್ಲಾಂಟ್ ಮಾಡಬೇಕೆಂದು ತಿಳಿಸಿದ್ದರು.
ಐಶ್ವರ್ಯಾ ಅವರ ತಾಯಿ ಲಿವರ್ ದಾನ ಮಾಡಲು ಸಿದ್ಧರಿದ್ದರು, ಆದರೆ ಐಶ್ವರ್ಯಾ ಅವರ ತಂಗಿ ಅನುಷಾ ತನ್ನ ಸಹೋದರಿಯ ಜೀವ ಉಳಿಸಲು ತನ್ನ ಸ್ವಂತ ಲಿವರ್ ದಾನ ಮಾಡುವ ಧೈರ್ಯವನ್ನು ತೆಗೆದುಕೊಂಡರು. ಕಸಿ ಪ್ರಕ್ರಿಯೆಗಾಗಿ ಇಬ್ಬರೂ ಸಹೋದರಿಯರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಯಕೃತ್ತಿನ ಕಸಿ ಸಮಯದಲ್ಲಿ ಐಶ್ವರ್ಯಾ ಹೃದಯಾಘಾತಕ್ಕೆ ಒಳಗಾಗಿ ಜ.24ಕ್ಕೆ ಪ್ರಾಣಬಿಟ್ಟಿದ್ದು ಅಕ್ಕನನ್ನು ಉಳಿಸುವ ತಂಗಿಯ ಯತ್ನ ವಿಫಲವಾಗಿದೆ.
ಇಂಜಿನಿಯರಿಂಗ್ ಪದವೀಧರರಾದ ಐಶ್ವರ್ಯಾ ಅವರ ಚಿಕಿತ್ಸೆಗೆ 40 ಲಕ್ಷ ರೂಪಾಯಿ ಖರ್ಚಾಗಿದ್ದು ವೈದ್ಯಕೀಯ ವೆಚ್ಚವನ್ನು ಭರಿಸಲು ಸಹಾಯ ಮಾಡುವಂತೆ ಕುಟುಂಬಸ್ಥರು ಸಾಮಾಜಿಕ ಮಾಧ್ಯಮದ ಮೂಲಕ ಸಹಾಯವನ್ನು ಕೋರಿದ್ದರು. ಸದ್ಯ ತಂಗಿ ಅನುಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.