ಪತ್ರಿಕಾ ಪ್ರಕಟಣೆ
ಮಂಗಳೂರು, ಜ 23 : ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರವು ಕೊಡಮಾಡುವ ಅಖಿಲ ಭಾರತ ಮಟ್ಟದ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ -2023, ಬಸ್ತಿ ವಾಮನ್ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ-2023 ಹಾಗೂ ಡಾ. ಪಿ ದಯಾನಂದ ಪೈ ವಿಶ್ವ ಕೊಂಕಣಿ ಪುರಸ್ಕಾರ- 2023 ಪ್ರಕಟಣೆಯಾಗಿವೆ.
ವರ್ಷದ ಅತ್ಯುತ್ತಮ ಕೊಂಕಣಿ ಸಾಹಿತ್ಯ ಕೃತಿಗೆ ನೀಡಲಾಗುವ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ- 2023 ಕ್ಕೆ ಗೋವಾದ ಕೊಂಕಣಿ ಲೇಖಕ ಪ್ರಕಾಶ್ ಪರಿಯಂಕಾರ ರಚಿಸಿದ "ಪೂರಣ್” ಆಯ್ಕೆಯಾಗಿದೆ.
ವರ್ಷದ ಅತ್ಯುತ್ತಮ ಕೊಂಕಣಿ ಕವಿತಾ ಕೃತಿಗೆ ನೀಡಲಾಗುವ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ -2023ಕ್ಕೆ ಕೇರಳದ ಕೊಂಕಣಿ ಕವಿ, ಲೇಖಕ ಆರ್ ಎಸ್ ಭಾಸ್ಕರ್ ರಚಿಸಿದ ಕೊಂಕಣಿ ಕವಿತಾ ಸಂಕಲನ "ಚೈತ್ರ ಕವಿತಾ" ಆಯ್ಕೆಯಾಗಿದೆ.
ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಹಿರಿಯರನ್ನು ಗೌರವಿಸಲು ಸ್ಥಾಪಿಸಲಾದ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ 2023ಕ್ಕೆ ಗೋವಾದ ಹಿರಿಯ ಕೊಂಕಣಿ ಕಲಾವಿದ ರಮಾನಂದ ರಾಯ್ಕರ ಇವರಿಗೆ ಕೊಂಕಣಿ ಭಾಷೆ, ಸಂಗೀತ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.
ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ -2023ಕ್ಕೆ ಮಹಿಳಾ ವಿಭಾಗದಲ್ಲಿ ಮೆಟಮೋರ್ಫೆಸ್ ಸೇವಾ ಸಂಸ್ಥೆಯ ಬೆಂಗಳೂರಿನ ಶಕುಂತಲಾ ಎ. ಭಂಢಾರಕಾರ ಆಯ್ಕೆಯಾಗಿದ್ದಾರೆ.
ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ -2023ಕ್ಕೆ ಪುರುಷರ ವಿಭಾಗದಲ್ಲಿ ಮಂಜೇಶ್ವರದ ಸ್ನೇಹಾಲಯ ಚ್ಯಾರಿಟೇಬಲ್ ಟ್ರಸ್ಟ್ ನ ಜೋಸೆಫ್ ಕ್ರಾಸ್ತಾ ಆಯ್ಕೆಯಾಗಿದ್ದಾರೆ.
ಡಾ . ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರ 2023ಕ್ಕೆ ಗೋವಾದ ಲೇಖಕ ರಮೇಶ ಲಾಡ್ ಆಯ್ಕೆಯಾಗಿದ್ದಾರೆ.
ಡಾ. ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಪುರಸ್ಕಾರ 2023ಕ್ಕೆ ಶ್ರೀನಿವಾಸ ರಾವ್ (ಕಾಸರಗೋಡು ಚಿನ್ನಾ) ಆಯ್ಕೆಯಾಗಿದ್ದಾರೆ.
ತಲಾ ಒಂದು ಲಕ್ಷ ರೂಪಾಯಿಗಳ ಸಮ್ಮಾನಧನ ಮತ್ತು ಫಲಕಗಳನ್ನು ಹೊಂದಿರುವ ಈ 7 ಪ್ರಶಸ್ತಿಗಳನ್ನು ಫೆಬ್ರುವರಿ 11ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿರುವ ವಾರ್ಷಿಕ ವಿಶ್ವ ಕೊಂಕಣಿ ಸಮಾರೋಹ ಸಮಾರಂಭದಲ್ಲಿ ಪ್ರದಾನಿಸಲಾಗುವುದು.
ಫೆಬ್ರವರಿ 10 ಮತ್ತು 11 ಕ್ಕೆ ನಡೆಯುವ ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹದ ಅಂಗವಾಗಿ ಸಂಜೆ 5.00 ರಿಂದ 8.00 ತನಕ ನಾಲ್ಕು ಕೊಂಕಣಿ ನಾಟಕಗಳು ಮಂಗಳೂರಿನ ಟಿ. ವಿ. ರಮಣ ಪೈ ಸಭಾಗೃಹದಲ್ಲಿ ಪ್ರದರ್ಶನಗೊಳ್ಳುವುದು.
1996ನೇ ಇಸವಿಯಲ್ಲಿ ವಿಶ್ವ ಕೊಂಕಣಿ ಸರದಾರ ಶ್ರೀ ಬಸ್ತಿ ವಾಮನ ಶೆಣೈಯವರ ನೇತೃತ್ವದಲ್ಲಿ ಪ್ರಾರಂಭವಾದ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನವು ವಿಶ್ವ ಕೊಂಕಣಿ ಕೇಂದ್ರವನ್ನು ಮಂಗಳೂರಿನ ಶಕ್ತಿನಗರದಲ್ಲಿ ಸ್ಥಾಪಿಸಿದ್ದು ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗಾಗಿ ಹಾಗೂ ಕೊಂಕಣಿ ಸಮುದಾಯಗಳ ಸರ್ವಾಂಗೀಣ ಬೆಳವಣಿಗೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈಯವರು ಈ ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತಾರೆ.