ಉಡುಪಿ, ಜ 23(DaijiworldNews/HR): ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ. ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರು. ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ. ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಿಜೆಪಿಗೆ ಅಭಿವೃದ್ಧಿ ಮತ್ತು ಬಡವರ ಚಿಂತನೆ ಬೇಕಾಗಿಲ್ಲ. ಎಷ್ಟು ಜನರಿಗೆ ನೀರಾವರಿ ವ್ಯವಸ್ಥೆ ಮಾಡಿದ್ದೀರಿ ಉದ್ಯೋಗ ಕೊಟ್ಟಿದ್ದೀರಿ?. ನಾವು ಪ್ರತಿದಿನ ಎದ್ದು ದೇವರ ಮನೆಯಲ್ಲಿ ನಮಸ್ಕಾರ ಮಾಡಿಯೇ ಹೊರಡೋದು. ನಾನು ಕಿಸ್ಕಿಂದ ಜಿಲ್ಲೆಯಲ್ಲಿರುವವನು. ನಾನು ಪ್ರತಿ ವರ್ಷ ಆಂಜನೇಯ ಮಾಲೆ ಹಾಕುತ್ತೇನೆ. ಭಕ್ತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಮಾಲೆ ಹಾಕುತ್ತೇನೆ. ಚುನಾವಣೆ ಬಂದಾಗ ಬಿಜೆಪಿಗೆ ಧರ್ಮ, ಮಸೀದಿ, ಪಾಕಿಸ್ತಾನ ನೆನಪಾಗುತ್ತದೆ. ಮತ್ತೊಬ್ಬರ ಹೆಗಲಲ್ಲಿ ಬಂದೂಕು ಒಟ್ಟು ಬಿಜೆಪಿ ದೇಶ ಆಳಿದೆ. ಕರ್ನಾಟಕದಲ್ಲಿ ಆದ ಪರಿಸ್ಥಿತಿಯೇ ದೇಶದಲ್ಲೂ ಬಿಜೆಪಿಗೆ ಬರಲಿದೆ ಎಂದರು.
ನಿಗಮ ಮಂಡಳಿ ನೇಮಕ ವಿಳಂಬ ವಿಚಾರದ ಕುರಿತು ಮಾತನಾಡಿದ ಅವರು, ಪಕ್ಷದ ಅಧ್ಯಕ್ಷರು ಮುಖ್ಯಮಂತ್ರಿಗಳು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅಧಿಕಾರ ಕೊಡುವಾಗ ಸಮನಾಗಿ ಜಿಲ್ಲಾವಾರು ಹಂಚಬೇಕಾಗುತ್ತದೆ. ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಶೀಘ್ರ ನೇಮಕ ಮಾಡುತ್ತಾರೆ ಎಂದಿದ್ದಾರೆ.
ಕನ್ನಡಕ್ಕೆ ಶಾಸ್ತ್ರೀಯ ಮಾನ್ಯತೆ ಅನುದಾನ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಬಿಜೆಪಿ ಸಂಸದರು ಗೆ ಪ್ರಶ್ನೆ ಮಾಡುತ್ತೇನೆ. ಹೆಚ್ಚಿನ ಅನುದಾನ ಬರುವ ಸಲುವಾಗಿಯೇ ಶಾಸ್ತ್ರೀಯ ಸ್ಥಾನಮಾನ ನೀಡಲಾಗುತ್ತೆ. ಬೇರೆ ರಾಜ್ಯಗಳಲ್ಲಿ ಇದರ ಲಾಭ ಪಡೆಯಲಾಗಿದೆ. ಆದರೆ ನಮ್ಮ ರಾಜ್ಯದ ಪರವಾಗಿ ಸಂಸದರು ಮೋದಿ ಅವರಿಗೆ ಒಂದು ಪತ್ರ ಬರೆದಿಲ್ಲ. ಈ ತಿಂಗಳ ಅಂತಕ್ಕೆ ನಾನು ದೆಹಲಿಗೆ ಹೋಗಲಿದ್ದೇನೆ. ಮೋದಿ ಅವರನ್ನು ನೋಡಿದರೆ ರಾಜ್ಯದ ಸಂಸದರಿಗೆ ಹೆದರಿಕೆಯಾಗುತ್ತದೆ ಎಂದರು.
ಎರಡನೇ ರಾಜ್ಯ ಯಕ್ಷಗಾನ ಸಮ್ಮೇಳನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅಕಾಡೆಮಿ ಅಧ್ಯಕ್ಷರು ಸದಸ್ಯರು ನೇಮಕ ಕುರಿತು ಈಗಾಗಲೇ ಎರಡು ಸುತ್ತಿನ ಮಾತುಕತೆಯಾಗಿದೆ. ಆದಷ್ಟು ಬೇಗ ಅಕಾಡೆಮಿ ನೇಮಕವಾಗಲಿದೆ, ಜವಾಬ್ದಾರಿ ಹಂಚಿಕೆಯಾಗಲಿದೆ. ಅಕಾಡೆಮಿಗಳು ಏನೇನು ಕೆಲಸ ಮಾಡಬೇಕು ಮಾಡುತ್ತಿವೆ. ಸದ್ಯ ಅಕಾಡೆಮಿಗಳಿಗೆ ನಾನೇ ಅಧ್ಯಕ್ಷ ಇದ್ದೇನೆ. ಆದಷ್ಟು ಬೇಗ ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕವಾಗುತ್ತದೆ ಎಂದಿದ್ದಾರೆ.
ಅನುದಾನದಲ್ಲಿ ಜಿಲ್ಲಾವಾರು ತಾರತಮ್ಯ ವಿಚಾರದ ಬಗ್ಗೆ ಮಾತನಾಡಿದ ಅವರು, ನಾವು ಪಕ್ಷವನ್ನು ನೋಡಿಕೊಂಡು ಅನುದಾನ ಹಂಚಿಕೆ ಮಾಡುತ್ತಿಲಲ್ಲ. ಆ ರೀತಿ ಮಾಡುವುದು ಬಿಜೆಪಿ ಮಾತ್ರ. ನಾವೆಲ್ಲರನ್ನು ಸಮನಾಗಿ ಕಾಣುತ್ತೇವೆ ಸಮಪಾಲು ಸಮ ಬಾಳು. ತಾರತಮ್ಯ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ ಅಧಿಕಾರಿಗಳನ್ನು ಮಾಹಿತಿ ಪಡೆಯುತ್ತೇನೆ. ಜಿಲ್ಲೆಯಿಂದ ಪ್ರಪೋಸಲ್ ಬಂದದ್ದಕ್ಕೆ ಹಣ ನೀಡುತ್ತದೆ. ಈ ಬಾರಿ ಕನ್ನಡ ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ಕೇಳಿದ್ದೇವೆ.ಮುಖ್ಯಮಂತ್ರಿಗಳಿಗೆ 40 ರಿಂದ 50 ಕೋಟಿ ಬೇಕು ಎಂದು ಮನವಿ ಮಾಡಿದ್ದೇನೆ. ನಮ್ಮಲ್ಲಿ ಅನುದಾನದ ಕೊರತೆ ಇಲ್ಲ ಬಿಜೆಪಿಗೆ ಮಾತ್ರ ಕೊರತೆ ಕಾಣುತ್ತದೆ ಎಂದು ಹೇಳಿದ್ದಾರೆ.