ಕಾರ್ಕಳ, ಜ 22 (DaijiworldNews/AK): ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ, ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎರಡನೇಯ ದಿನವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಪುಣ್ಯಕ್ಷೇತ್ರದ ಮಹೋತ್ಸವದ ಅಂಗವಾಗಿ 'ಎಡೆಬಿಡದೆ ಪ್ರಾರ್ಥಿಸೋಣ' ಎಂಬ ದಿನದ ವಿಷಯವನ್ನು ಧ್ಯಾನಿಸಲಾಯಿತು. ಎರಡನೇ ದಿನದ ಹಬ್ಬದ ಪ್ರಮುಖ ಬಲಿಪೂಜೆಯನ್ನು ಕನ್ನಡ ಭಾಷೆಯಲ್ಲಿ ಶಿವಮೊಗ್ಗದ ಧರ್ಮಾಧ್ಯಕ್ಷರಾಂದತಹ ಪರಮಪೂಜ್ಯ ಫ್ರಾನ್ಸಿಸ್ ಸೆರಾವೊ ಎಸ್.ಜೆ. ನೆರವೇರಿಸಿ ಪ್ರಾರ್ಥನಾ ವಿಷಯವಾಗಿ ಪ್ರಬೋಧನೆಯನ್ನು ನೀಡಿದರು.
"ಶಸ್ತ್ರ ಚಿಕಿತ್ಸೆ ಕೆಲಸ ಮಾಡುವುದಿಲ್ಲ. ತಂತ್ರಜ್ಞಾನ ಕೆಲಸಮಾಡುವುದಿಲ್ಲ. ಮೊಣಕಾಲೂರಿ, ನಿರಂತರ ಪ್ರಾರ್ಥಿನೆ ಫಲವನ್ನು ಕೊಡುತ್ತದೆ. ಪ್ರಾರ್ಥನೆ ರೀತಿ ನಿಯಮಗಳನ್ನು ಪಾಲಿಸಿದರೆ ಮಾತ್ರ ವರದಾನ ಲಭಿಸುತ್ತದೆ. ಪ್ರಾರ್ಥನೆಯಲ್ಲಿ 3 ಹಂತಗಳಿವೆ ವಿಶ್ವಾಸ, ಆಸೆ ಬಯಕೆ, ಆಂತರಿಕ ಸ್ವಾತಂತ್ರ್ಯ ಎಂಬ ಸಂದೇಶವನ್ನು ನೀಡಿದರು.
ಭಕ್ತಜನಸಾಗರ ಎಂದಿನಂತೆ ಬಸಿಲಿಕದ ವಠಾರದಲ್ಲಿ ಒಂದುಗೂಡಿ ತಮ್ಮ ಭಕ್ತಿಕಾರ್ಯಗಳಲ್ಲಿ ಮಗ್ನರಾಗಿ ಪ್ರಾರ್ಥಿಸಿದರು. ಜನವರಿ 22 ರಂದು ಬೆಳಿಗ್ಗೆ ಪುಣ್ಯಕ್ಷೇತ್ರದ ಸಂತ ಲಾರೆನ್ಸರ ಪವಿತ್ರ ಅವಶೇಷ ಹಾಗೂ ಪವಾಡ ಮೂರ್ತಿಯ ಸಂಪುಟವನ್ನು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಠಾಪಿಸಿದರು. ಅಂತೆಯೇ ಭಕ್ತಜನರು ಆ ಸಂಪುಟದ ದಿವ್ಯದರ್ಶನ ಹಾಗೂ ಆಶೀರ್ವಾದಕ್ಕಾಗಿ ಭಕ್ತಿ ಪರವಶೆಯಿಂದ ಪಾಲ್ಗೊಂಡರು.
ದಿನದ ಇತರ ಬಲಿಪೂಜೆಗಳನ್ನು ವಂದನೀಯ ಜೋಯ್ ಜೊಯ್ ಅಂದ್ರಾದೆ, ಕಲ್ಯಾಣ್ಪುರ್, ವಂದನೀಯ ಜೆ.ಬಿ. ಸಲ್ದಾನ್ದ್ರ ಬಿಜೈ ಮಂಗಳೂರು, ವಂದನೀಯ ಡಾ. ರೋಷನ್ ಡಿ'ಸೋಜ, ಕುಲಪತಿ, ಉಡುಪಿ ಧರ್ಮಕ್ಷೇತ್ರ, ವಂದನೀಯ ವಿಜಯ್ ಡಿ'ಸೋಜ ಪಾಂಗ್ಳಾ, ವಂದನೀಯ ಬೊನವೆಂಚರ್ ನಜ್ರತ್ ಮಿಲಾಗ್ರಿಸ್ ಮಂಗಳೂರು, ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ. ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ವಂದನೀಯ ಪೌಲ್ ರೇಗೊ ವಲಯಾಧಿಕಾರಿಗಳು, ಕಾರ್ಕಳ ವಲಯ ನೆರವೇರಿಸಿದರು.
ಜನಸ್ತೋಮವು ಸೂರ್ಯಾಸ್ತಮಯ ಸಮಯದಲ್ಲಿ ತಮ್ಮ ಹರಕೆಯ ಮೊಂಬತ್ತಿಯನ್ನು ಬೆಳಗಿಸಿ, ದಿವ್ಯ ತೈಲವನ್ನು ಸ್ವೀಕರಿಸಿ, ಪವಿತ್ರ ಪುಷ್ಕರಣಿಯ ಸನ್ನಿಧಿ ಧಾವಿಸಿ, ಪುಣ್ಯಕ್ಷೇತ್ರದ ಪುಣ್ಯ ತೀರ್ಥವನ್ನು ಪಡೆದು, ಜಪತಪ ಪ್ರಾರ್ಥನೆ ಹಾಗೂ ಬಸಿಲಿಕದ ಶ್ರೇಷ್ಠ ಪಾಲಕ ಸಂತ ಲಾರೆನ್ಸರ ದಿವ್ಯ ಸಾನಿಧ್ಯ ಬಳಿ ಧಾವಿಸಿ ಪ್ರಾರ್ಥಿಸಿ ತೆರಳಿದರು. ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ 8 ಗಂಟೆಗೆ ನೆರವೇರಿಸಿ ಮಹೋತ್ಸವದ ದ್ವಿತೀಯ ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಭಕ್ತಿ-ಆಚರಣೆಗಳನ್ನು ಭಕ್ತಿಯುತವಾಗಿ ಮುಕ್ತಾಯಗೊಳಿಸಲಾಯಿತು.
ಈ ಸಂಧರ್ಭದಲ್ಲಿ ಬಸಿಲಿಕಾದ ರೆಕ್ಟರ್ ವಂದನೀಯ ಆಲ್ಬನ್ ಡಿಸೋಜಾ, ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಧರ್ಮಗುರು ಮೊನ್ಸಿಂಜರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಮತ್ತು ಇತರ ಧರ್ಮಗುರುಗಳು ಉಪಸ್ಥಿತರಿದ್ದರು.