ಉಳ್ಳಾಲ, ಜ 22 (DaijiworldNews/AK): ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ದಿನದಂದೇ ದೇರಳಕಟ್ಟೆ ಮಡ್ಯಾರು ನಿವಾಸಿ ರಿಕ್ಷಾ ಚಾಲಕರೊಬ್ಬರು ದುಡಿದ ಆದಾಯದ ಅಲ್ಪಮೊತ್ತದಲ್ಲಿ ಮಂಗಗಳಿಗೆ ಹಣ್ಣುಗಳನ್ನು ಉಣಬಡಿಸಿದ್ದಾರೆ.
ತಾನು ದುಡಿಯುತ್ತಿದ್ದ ಸಂದರ್ಭ ಸಂಭವಿಸಿದ ಎರಡು ಅಪಘಾತಗಳ ಸಂದರ್ಭ ರಾಮನ ಹೆಸರನ್ನೆತ್ತಿದ್ದೂ, ಪವಾಡಸದೃಶವೆಂಬಂತೆ ತಾನು ಹಾಗೂ ಪ್ರಯಾಣಿಕರು ಗಾಯಗಳಿಲ್ಲದೆ ಪಾರಾಗಿರುವ ಹಿನ್ನಲೆ ಕೃತಜ್ಞತೆ ಮೂಲಕ ಸಮರ್ಪಿಸಿರುವುದಾಗಿ ತಿಳಿಸಿದ್ದಾರೆ.
ಮೂಲತ: ಕೈರಂಗಳ ನಿವಾಸಿ ಸದ್ಯ ಮಡ್ಯಾರು ಬಾಡಿಗೆ ಮನೆಯಲ್ಲಿ ವಾಸಿಸುವ ರಾಜೇಶ್ ಕೈರಂಗಳ ಇವರು ಅಯೋಧ್ಯೆಯಲ್ಲಿ ಮಂದಿರ ಸ್ಥಾಪನೆ ಹಾಗೂ ಪ್ರಭು ಶ್ರೀ ರಾಮನ ಭಕ್ತಿಯಿಂದ ಮಂಗಗಳಿಗೆ ತಿನಿಸುಗಳನ್ನು ನೀಡಿದ್ದಾರೆ.
ಕಳೆದ 30 ವರ್ಷದಿಂದ ರಿಕ್ಷಾ ಚಾಲಕರಾಗಿ ದುಡಿಯುತ್ತಿರುವ ಇವರು, ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ರಿಕ್ಷಾ ಪಾರ್ಕಿನಲ್ಲಿ ಬಾಡಿಗೆ ನಡೆಸುತ್ತಿದ್ದಾರೆ. ಜೀವನದುದ್ದಕ್ಕೂ ದುಡಿದ ಅಲ್ಪ ಪಾಲನ್ನು ಸಮಾಜಸೇವೆಗೆ ಮುಡಿಪಾಗಿರಿಸುತ್ತಾ ಬಂದಿದ್ದಾರೆ.
ರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟ ಪರ್ಸನ್ನು ಹಿಂತಿರುಗಿಸಿ ಪ್ರಾಮಾಣಿಕತನವನ್ನು ಮೆರೆದವರು. ರೋಗಿಗಳು, ಬಡವರಿಗೆ ಮಿಡಿಯುವ ಹೃದಯ ಉಚಿತವಾಗಿ ರಿಕ್ಷಾದಲ್ಲಿಅವರನ್ನು ಕೊಂಡೊಯ್ದು ಮಾನವೀಯತೆಯನ್ನು ಎತ್ತಹಿಡಿದವರು.
ವಿವಾಹಿತರಾಗಿರುವ ರಾಜೇಶ್ ಓರ್ವ ಪುತ್ರಿ, ಪುತ್ರ ಹಾಗೂ ಪತ್ನಿ ಜತೆಗೆ ವಾಸಿಸುತ್ತಿದ್ದಾರೆ.ಬಹುವರ್ಷಗಳ ಹಿಂದೂ ಸಮಾಜದ ಕನಸು ಇಂದು ನನಸಾಗಿದೆ. ಸಮಾಜಕ್ಕೆ ಇಂದಿನ ದಿನ ಏನಾದರೂ ನೀಡಬೇಕೆಂಬ ಆಸೆಯಿತ್ತು. ಮಾತು ಬಾರದ ಪ್ರಾಣಿಗಳಿಗಷ್ಟೇ ತನ್ನಿಂದ ಸೇವೆ ನೀಡಲು ಸಾಧ್ಯ ಅನ್ನುವ ಮನೋಭಾವದಿಂದ ಬಂಟ್ವಾಳದ ನರಹರಿ ಪರ್ವತದಲ್ಲಿ ಪೂಜಾ ಸಮಯಕ್ಕೆ ಬರುವ ವಾನರರಿಗೆ ಬಾಳೆಹಣ್ಣುಗಳನ್ನು ನೀಡಬೇಕೆಂಬ ಉದ್ದೇಶವನ್ನಿಟ್ಟು ಹಣ್ಣುಗಳನ್ನು ವಿತರಿಸಿದ್ದೇನೆ ಎಂದರು.
ಉಳಿದಿರುವ ಹಣ್ಣುಗಳನ್ನು ಗೋಶಾಲೆಗೂ ನೀಡಿದ್ದು, ಒಂದು ಬಾರಿ ಬೋಂದೇಲ್ ಪ್ರದೇಶದಲ್ಲಿ ತನ್ನ ರಿಕ್ಷಾ ಪಲ್ಟಿಯಾಗುತ್ತಿದ್ದಂತೆ ರಾಮನ ಹೆಸರನ್ನು ಕೂಗಿ ಸುರಕ್ಷತೆಗೆ ಬೇಡಿಕೊಂಡಿದ್ದೆ. ದೇವರ ದಯೆಯಿಂದ ಪ್ರಯಾಣಿಕರು ಹಾಗೂ ತಾನು ಅಪಾಯದಿಂದ ಪಾರಾಗಿದ್ದೆವು. ಅದೇ ರೀತಿಯಲ್ಲಿ ಲಾರಿ ಚಲಾಯಿಸುವಾಗಲೂ ಸಂಭವಿಸಿದ ಅಪಘಾತದ ಸಂದರ್ಭವೂ ರಾಮನನ್ನು ನೆನೆದುಕೊಂಡಿದ್ದು, ಅಲ್ಲಿಯೂ ಪವಾಡ ರೀತಿಯಲ್ಲಿ ಪಾರಾಗಿದ್ದೆನು ಅನ್ನುತ್ತಾರೆ ರಾಜೇಶ್.
ಕೈರಂಗಳ ಭಾಗದಲ್ಲಿ ಹಿಂದೂ ಸಂಘಟನೆಗಳಲ್ಲಿದ್ದು ಕೊಂಡು, ಬಿಜೆಪಿ ಬೂತ್ ಅಧ್ಯಕ್ಷರಾಗಿದ್ದವರು ಸದ್ಯ ಪಕ್ಷದಲ್ಲಿ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ.