ಕುಂದಾಪುರ, ಜ 22 (DaijiworldNews/HR): ಅಯೋಧ್ಯೆಯಲ್ಲಿಂದು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಟೆಯ ಪ್ರಯುಕ್ತ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಪ್ರತೀ ಊರುಗಳಲ್ಲಿಯೂ ಕೇಸರಿ ತೋರಣಗಳು, ಶ್ರೀರಾಮನ ಬಾವುಟಗಳು ರಾರಾಜಿಸುತ್ತಿವೆ. ಕುಂದಾಪುರದಲ್ಲಿಯೂ ವಿವಿಧೆಡೆಗಳಲ್ಲಿ ರಾಮಭಕ್ತರು ಸಂಘಟನಾತ್ಮಕವಾಗಿ ಶ್ರೀರಾಮನ ಹೆಸರಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿವೆ.
ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿರುವ ಬಸ್ ಏಜೆಂಟರು ಶಾಸ್ತ್ರೀ ಸರ್ಕಲ್ ಫ್ರೆಂಡ್ಸ್ ಮೂಲಕ ಶ್ರೀರಾಮ ಪ್ರಿಯವಾದ ಬೇಲೆ ಖೀರು ಪಾಯಸವನ್ನು ಹಂಚಿ ಸಂಭ್ರಮಿಸಿದರು. ನೂರಾರು ಭಕ್ತರು ಪಾಯಸ ಸವಿದು ಸಂತಸ ವ್ಯಕ್ತಪಡಿಸಿದರು.
ಇನ್ನು ಕುಂದಾಪುರದ ರಥಬೀದಿ ಕಟ್ಟೆ ಫ್ರೆಂಡ್ಸ್ ವತಿಯಿಂದ 10 ಸಾವಿರ ಲಡ್ಡು ವಿತರಣೆ ಸೇವೆ ನಡೆಯಿತು. ಜೊತೆಗೆ ಗೋಶಾಲೆಯಲ್ಲಿಯೂ ಕೈ ಧರ್ಮದಿಂದ ವಿಶೇಷ ಸೇವೆ ನಡೆಯಿತು.
ಕುಂಬಾಸಿಯ ಆನೆಗುಡ್ಡೆ ವಿನಾಯಕ ದೇವಸ್ಥಾನ, ಕುಂದಾಪುರದ ಶ್ರೀರಾಮ ಮಂದಿರ ದೇವಸ್ಥಾನ ಸೇರಿದಂತೆ ಹಲವೆಡೆಗಳಲ್ಲಿ, ಬೈಂದೂರು ತಾಲೂಕಿನ ಉಪ್ಪುಂದದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಹೇರಂಜಾಲು ದೇವಸ್ಥಾನ ಮೊದಲಾದೆಡೆಗಳಲ್ಲಿ ಶ್ರೀರಾಮನ ಜಪ, ಭಜನಾ ಕಾರ್ಯಕ್ರಮಗಳು ನಡೆದವು.