ಮಂಗಳೂರು, ಜ 22 (DaijiworldNews/SK): ಇಡೀ ದೇಶವೇ ಕಾತುರತೆಯಿಂದ ಕಾಯುತ್ತಿದ್ದ ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಂಪನ್ನಗೊಂಡಿದೆ. ಈ ಪ್ರಯುಕ್ತ ಇಂದು ಮಂಗಳೂರಿನ ಎರಡು ಖಾಸಗಿ ಬಸ್ ಗಳು ಪ್ರಯಾಣಿಕರಿಗೆ ಉಚಿತ ಸೇವೆ ಒದಗಿಸುತ್ತಿವೆ.
ಸ್ಟೇಟ್ ಬ್ಯಾಂಕ್ನಿಂದ ಬೊಂದೇಲ್ಗೆ ಪ್ರಯಾಣಿಸುವ 19 ಸಂಖ್ಯೆಯ ಜೀವನ್ ಜೀತ್ ಮತ್ತು ಸ್ಟೇಟ್ಬ್ಯಾಂಕ್ನಿಂದ ಪಂಜಿಮೊಗರು ಮೂಲಕ ಬೊಂದೇಲ್ಗೆ ಬರುವ ೧೩ ಸಿ ಸಂಖ್ಯೆಯ ಗೋಲ್ಡನ್ ಟ್ರಾವೆಲ್ಸ್ ತನ್ನ ಗ್ರಾಹಕರಿಗೆ ಉಚಿತ ಸೇವೆ ನೀಡುತ್ತಿರುವ ಬಸ್ ಗಳು.
ಜೀವನ್ ಜೀತ್ ಎಂಬ ಹೆಸರಿನ ಎರಡು ಬಸ್ ಗಳಿದ್ದು, ಪ್ರತಿದಿನ ೨೦೦೦ ಸಾವಿರ ಪ್ರಯಾಣಿಕರು ಈ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಆದರೆ ಇತರ ದಿನಗಳಿಗೆ ಹೋಲಿಸಿದರೆ ಜ 22 ರಂದು ೨೦೦೦ ಕ್ಕೂ ಅಧಿಕ ಸಂಖ್ಯೆಯ ಜನರು ಪ್ರಯಾಣಿಸುವ ಮೂಲಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
19 ಸಂಖ್ಯೆಯ ಬಸ್ ಮಾಲಕ ಸಂದೀಪ್ ಅವರು, ಪ್ರಯಾಣಿಕರಿಗೆ ಅಯೋಧ್ಯೆಯ ರಾಮಲಲ್ಲಾದ ಪ್ರಾಣಪ್ರತಿಷ್ಠೆಯ ನಿಮಿತ್ತ ಒಂದು ದಿನದ ಉಚಿತ ಸೇವೆಯನ್ನು ನೀಡಲು ನಿರ್ಧರಿಸಿದರೇ, 13 ಸಿ ಗೋಲ್ಡನ್ ಟ್ರಾವೆಲ್ಸ್ನ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ನಾಲ್ವರು ಸ್ನೇಹಿತರು ಸೇರಿ ಸ್ವಯಂಪ್ರೇರಿತವಾಗಿ ಉಚಿತ ಸೇವೆಯನ್ನು ನೀಡಲು ತೀರ್ಮಾನಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಜೀವನ್ ಜೀತ್ ಬಸ್ಸಿನ ಚಾಲಕ ಮನೋಜ್ ಮತ್ತು ನಿರ್ವಾಹಕ ಹನೀಫ್, ಅಯೋಧ್ಯೆ ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠೆ ಹಿನ್ನಲೆ ಜ.22ರಂದು ಉಚಿತ ಸೇವೆ ನೀಡುವುದಾಗಿ ಮಾಲೀಕರು ತಿಳಿಸಿದ್ದರಿಂದ ಇಂದು ಪ್ರಯಾಣಿಕರಿಂದ ಟಿಕೆಟ್ ವಸೂಲಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಸ್ವಯಂ ಪ್ರೇರಣೆಯಿಂದ ಪ್ರಯಾಣಿಕರಿಗೆ ಉಚಿತ ಸೇವೆ ನೀಡಲು ನಿರ್ಧರಿಸಿದ 13ಸಿ ಗೋಲ್ಡನ್ ಟ್ರಾವೆಲ್ಸ್ನ ಚಾಲಕ ಗಣೇಶ್ ಮತ್ತು ನಿರ್ವಾಹಕ ಹೇಮಂತ್ ಪ್ರತಿಕ್ರಿಯಿಸಿ, ಅಯೋಧ್ಯೆ ಮಂದಿರ ನಿರ್ಮಾಣಕ್ಕೆ ಸೇವೆ ಸಲ್ಲಿಸಲು ನಮ್ಮ ಕೈಯಿಂದ ಸಾಧ್ಯವಿಲ್ಲದಿದ್ದರೂ, ಕನಿಷ್ಠ ಪಕ್ಷ ಸಾರ್ವಜನಿಕರಿಗೆ ಉಚಿತ ಬಸ್ ಸೇವೆ ನೀಡುವ ಮೂಲಕವಾದರೂ ನಾವು ಕೊಡುಗೆ ನೀಡಿದ್ದೇವೆ. ಇದ್ದರಿಂದ ಸಾವಿರಾರೂ ಜನರ ಆಶೀರ್ವಾದ ಕೂಡ ಪಡೆದಿದ್ದೇವೆ. ನಮ್ಮ ಬಸ್ ನಿತ್ಯ ಮಂಗಳೂರಿನಿಂದ ಬೊಂದೇಲ್ ಗೆ 10 ಟ್ರಿಪ್ ಸಂಚರಿಸುತ್ತಿದ್ದು, ಸರಿಸುಮಾರು 12500 ಆದಾಯ ಬರುತ್ತಿತ್ತು. ಇವತ್ತಿನ ಉಚಿತ ಸೇವೆಯ ಆದಾಯದ ಮೊತ್ತವನ್ನು ನಾವು ನಾಲ್ಕು ಮಂದಿ ಸೇಹ್ನಿತರು ಸೇರಿ ಬಸ್ ಮಾಲಕರಿಗೆ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.