ಕುಂದಾಪುರ, ಜ 22 (DaijiworldNews/HR): ಜನವರಿ 22 ದೇಶದಾದ್ಯಂತ ರಾಮನಾಮ ಜಪದಲ್ಲಿ ಮುಳುಗಿದರೆ ಕುಂದಾಪುರ ತಾಲೂಕಿನ ಆಜ್ರಿ ಎಂಬ ಪುಟ್ಟ ಗ್ರಾಮದ ಕೊಡ್ಲಾಡಿಯ ಕಲಾವಿದನೊಬ್ವ ಶ್ರೀರಾಮನ ಭಕ್ತಿಯನ್ನು ಕಲ್ಲಂಗಡಿಯಲ್ಲಿ ಅರಳಿಸಿದ್ದಾರೆ.
ಆಜ್ರಿ ಗ್ತಾಮದ ರಾಘವೇಂದ್ರ ಮೊಗವೀರ ಕೊಡ್ಲಾಡಿ ಎಂಬ ಬಡ ಕಲಾವಿದನ ಕೈಯಲ್ಲಿ ಇದುವರೆಗೆ ಸಾವಿರಾರು ಕಲಾಕೃತಿಗಳು ತರಕಾರಿಗಳಲ್ಲಿ ಅರಳಿದೆ. ಅಲ್ಲದೇ ಹತ್ತು ಹಲವು ಥರ್ಮಾಕೋಲ್ ಡಿಸೈನಿಂಗ್, ನಾಮಫಲಕ ತಯಾರಿಕೆ, ಮದುವೆ ಹಾಗೂ ಇತರ ಸಮಾರಂಭಗಳಿಗೆ ವೇದಿಕೆ ನಿರ್ಮಾಣಸಲ್ಲಿ ತೊಡಗಿಸಿಕೊಂಡಿರುವ ಇವರನ್ನು ಕಲಾವಿದನನ್ನಾಗಿ ಗುರುತಿಸುವಂತೆ ಮಾಡಿದ್ದು ವಿವಿಧ ತರಕಾರಿಗಳಿಂದ ಅರಳಿದ ವಿವಿಧ ಕಲಾಕೃತಿಗಳು.
ಒಂದಿಷ್ಟು ಹಣ್ಣು, ತರಕಾರಿಗಳನ್ನು ಕೊಟ್ಟರೆ ಇವರ ಚಿತ್ರ ಚಿಮತ್ಕಾರ, ಹಸ್ತ ಚಮತ್ಕಾರ ಮಿಲನಗೊಂಡು ಚಾಕುವಿನಿಂದ ಎಳೆದು, ಕುಯ್ದು ಸುಂದರ ಕಲಾಕೃತಿಗಳನ್ನು ಎದುರಿಗಿಡುತ್ತಾರೆ. ಪಪ್ಪಾಯಿ ತಾವರೆಯಾಗುತ್ತದೆ, ಹಾಗಲಕಾಯಿ ಡೈನೋಸಾರ್ ಆಗಿ ಬೆಚ್ಚಿ ಬೀಳಿಸುತ್ತದೆ.
ಶ್ರೀ ರಾಮನ ಪ್ರತಿಷ್ಟಾಪನೆಗೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ಎಲ್ಲರ ಮನೆ ಮನದಲ್ಲೂ ರಾಮನಾಮ ಸ್ಮರಣೆ ಜೈ ಶ್ರೀರಾಮ್ ಎಂಬ ಉದ್ಘೋಷ ಮೊಳಗುತ್ತಿದೆ. ಇದೇ ಸಂದರ್ಭ ರಾಘವೇಂದ್ರ ಮೊಗವೀರ ಅವರ ಕೈಯಲ್ಲಿ ಅರಳಿದ ಶ್ರೀರಾಮನ ಕಲಾಕೃತಿ ಎಲ್ಲೆಡೆ ವೈರಲ್ಲಾಗುತ್ತಿದೆ.