ಉಡುಪಿ, ಜ 22 (DaijiworldNews/AA): ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ದೇಶದಾದ್ಯಂತ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಕರ್ಯಗಳು ನಡೆಯುತ್ತಿವೆ. ಇದೇ ರೀತಿ ಉಡುಪಿಯ ಶ್ರೀ ಕೃಷ್ಣ ಮಠದಲ್ಲೂ ವಿಶೇಷ ಪೂಜಾ ಕೈಕರ್ಯಗಳು ನಡೆಯುತ್ತಿವೆ.
ಉಡುಪಿಯ ಶ್ರೀ ಕೃಷ್ಣನಿಗೆ ಸುವರ್ಣ ಕವಚ ಅಲಂಕಾರ ಸೇವೆಯನ್ನು ಮಾಡಲಾಗುತ್ತಿದ್ದು, ಪರ್ಯಾಯ ಪುತ್ತಿಗೆ ಮಠವು ವಿಶೇಷ ಅಲಂಕಾರ ಸೇವೆ ಮಾಡಿದೆ. ಇದರೊಂದಿಗೆ ಅಯೋಧ್ಯೆಯಿಂದ ಬಂದ ಹನುಮನಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಹನುಮನ ಎದೆಯಲ್ಲಿ ಬೆಳ್ಳಿಯ ರಾಮ ಸೀತೆಯನ್ನು ಇಡಲಾಗಿದೆ.
ಮುಖ್ಯಪ್ರಾಣ ದೇವರಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಗಿದ್ದು, ಮುಖ್ಯಪ್ರಾಣ ದೇವರು ಸೀತಾ ರಾಮ ದೇವರನ್ನು ಹೊತ್ತುಕೊಂಡಿದೆ. ಇಂದು ದಿನ ಪೂರ್ತಿ ಉಡುಪಿ ಕೃಷ್ಣ ಮಠದಲ್ಲಿ ರಾಮೋತ್ಸವ ನಡೆಯಲಿದ್ದು, ಈ ರಾಮೋತ್ಸವಕ್ಕೆ ಪುತ್ತಿಗೆ ಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ. ಹಾಗೂ ಮಠದಲ್ಲಿ ನಡೆಯುವ ನಿರಂತರ ಭಜನಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.
ಉಡುಪಿ ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸುಶ್ರೀಂದ್ರತೀರ್ಥ ಸ್ವಾಮೀಜಿ ಹಾಗೂ ಶಾಸಕ ಯಶ್ ಪಾಲ್ ಸುವರ್ಣ, ರಾಮ ಭಕ್ತರು ಭಾಗಿಯಾಗಲಿದ್ದಾರೆ. ಇನ್ನು ಇಂದು ಬೆಳಗ್ಗೆ ಇಂದಲೇ ಸಾವಿರಾರು ಜನರು ಮಠಕ್ಕೆ ಭೇಟಿ ನೀಡುತ್ತಿದ್ದು ದೇವರ ದರ್ಶನ ಪಡೆಯುತ್ತಿದ್ದಾರೆ.