ಕಾರ್ಕಳ, ಜ, 21(DaijiworldNews/AK): ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಜನವರಿ 21 ರಂದು ಭಾನುವಾರ ವಿಜೃಂಭಣೆಯಿಂದ ಆರಂಭಗೊಂಡಿತು.
ಮಹೋತ್ಸವವು 6 ದಿನಗಳ ಕಾಲ 21 ರಿಂದ 26 ರವೆರೆಗೆ ನಡೆಯಲಿದೆ. ಈ ವರ್ಷದ ಮಹೋತ್ಸವದ ವಿಷಯ “ಕೇಳಿರಿ ನಿಮಗೆ ಕೊಡಲಾಗುವುದು".
ಜನವರಿ 21 ರಂದು ಬೆಳಿಗ್ಗೆ ಪುಣ್ಯಕ್ಷೇತ್ರದ ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ಹಾಗು ಪವಾಡ ಮೂರ್ತಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಸಾರ್ವಜನಿಕರ ದರ್ಶನಕ್ಕಾಗಿ ಮಂಟಪದಲ್ಲಿ ಪ್ರತಿಷ್ಟಾಪಿಸಿದರು.
ತದನಂತರ ರಾಜಕೀಯ ಮುತ್ಸುದ್ದಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ರವರು ಧ್ವಜರೋಹಣ ಮಾಡುವುದರ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿದರು.
ದಿನದ ಪ್ರಮುಖ ಸಾಂಪ್ರಾದಾಯಿಕ ಬಲಿಪೂಜೆಯನ್ನು ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷರು ಪರಮಪೂಜ್ಯ ಡೊ. ಅಲೋಶಿಯಸ್ ಪಾವ್ ಡಿ' ಸೋಜ ನೆರವೇರಿಸಿ ಪ್ರವಚನ ನೀಡಿದರು.
ದೇವರ ವಾಕ್ಯದ ಭಾನುವಾರದ ಪ್ರಯುಕ್ತ ವಿಶೇಷ ಪ್ರಭೋದನೆ ನೀಡಿದ ಅವರು, "ದೇವರ ವಾಕ್ಯವನ್ನು ಆಲಿಸಿ, ಅದನ್ನು ಧ್ಯಾನಿಸಿ, ಜೀವನದಲ್ಲಿ ಪಾಲಿಸಿದಾಗ ಸದ್ಗುಣಗಳ ಫಲವನ್ನು ನೀಡಲು ಸಾಧ್ಯ. ಈ ಮುಖಾಂತರ ನಾವೆಲ್ಲರೂ ದೇವರ ಪ್ರೀತಿಯ ಮಕ್ಕಳಾಗುತ್ತೇವೆ ಎಂದು ನುಡಿದರು.
ದಿನದ ಇತರ ಬಲಿಪೂಜೆಗಳನ್ನು ವಂದನೀಯ ವಿನ್ಸೆಂಟ್ ಸೀಕ್ವೆರಾ, ಬಟ್ಟೋಡಿ, ವಂದನೀಯ ನವೀನ್ ಪಿಂಟೊ, ಮಂಗಳೂರು, ವಂದನೀಯ ಮೊನ್ಸಿಜೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಶ್ರೇಷ್ಠ ಧರ್ಮಗುರುಗಳು ಉಡುಪಿ ಧರ್ಮಕ್ಷೇತ್ರ, ವಂದನೀಯ ರಾಜೇಶ್ ರೊಜಾರಿಯೊ, ಮಂಗಳೂರು ವಂದನೀಯ ಡಾಕ್ಟರ್ ರೊಕ್ ಡಿ' ಸೋಜ, ಸಂತೆಕಟ್ಟೆ, ವಂದನೀಯ ಬೊನಿಫಾಸ್ ಪಿಂಟೊ, ಮೂಡುಬೆಳ್ಳೆ, ವಂದನೀಯ ಚೇತನ್ ಲೋಬೊ, ಬಿಜೈ ಇವರು ನೆರವೇರಿಸಿದರು.
ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ 8 ಗಂಟೆಗೆ ನೆರವೇರಿಸಿ ಮಹೋತ್ಸವದ ಪ್ರಥಮ ದಿನದ ಧಾರ್ಮಿಕ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು.