ಕಾರ್ಕಳ, ಜ 21 (DaijiworldNews/HR): ವರುಷದ ಮೊದಲ ತಿಂಗಳು ಕಳೆಯುತ್ತಾ ಬಂದಿದೆ. ಬಿಸಿಲಿನ ತಾಪ ಏರಿಕೆ ಕಂಡು ಬರುತ್ತಿದೆ. ಆದರೂ ಕಾರ್ಕಳ ಪುರಸಭೆ ವ್ಯಾಪ್ತಿಗೆ ನೀರಿನ ಆಸರೆಯಾಗಿದ್ದ ಮುಂಡ್ಲಿ ಕಿರು ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಿನ ಮಟ್ಟದಲ್ಲಿ ಇರುವುದರಿಂದ ಕುಡಿಯುವ ನೀರಿನ ತಾತ್ವಾರ ಎದುರಾಗದೇ ನಾಗರಿಕರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗಿದೆ.
ಕಾರ್ಕಳ ನಗರ ಪ್ರದೇಶಕ್ಕೆ ನೀರಿನ ಆಸರೆಯಾಗಿರುವ ಮುಂಡ್ಲಿಯ ಕಿರುಅಣೆಕಟ್ಟು 12 ಅಡಿ ಎತ್ತರದ ವಿದ್ದು, ಜನವರಿ 18ರಂದು 12 ಅಡಿ ಎತ್ತರ ಅಳತೆಯಲ್ಲಿ ಮುಂಡ್ಲಿ ಡ್ಯಾಂ ಪೂರ್ತಿ ನೀರು ಸಂಗ್ರಹಣೆಗೊಂಡು ಹೆಚ್ಚುವರಿ ನೀರು ಹೊರ ಹರಿಯುತ್ತಿದೆ.
ಕಳೆದ ವರ್ಷ ಇದೇ ಸಂದರ್ಭದಲ್ಲಿ ಕೇವಲ 4 ಅಡಿ ಎತ್ತರ ಮಾತ್ರ ನೀರು ಶೇಖರಣೆಗೊಂಡಿತ್ತು. ವರ್ಷದ ಆರಂಭದಲ್ಲಿಯೇ ರಾಜ್ಯ ವ್ಯಾಪ್ತಿಯಲ್ಲಿ ಅಕಾಲಿಕ ಮಳೆ ಸುರಿದಿದ್ದು, ಪಶ್ವಿಮಘಟ್ಟದಿಂದ ಹರಿದು ಬಂದ ಮಳೆ ನೀರು ಮುಂಡ್ಲಿ ಕಿರು ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವುದರಿಂದ ನೀರಿನ ತಾತ್ವಾರ ಎದುರಾಗದೇ ಇರಲು ಕಾರಣವೂ ಆಗಿದೆ.
ಇನ್ನು ಮತ್ತೊಂದೆಡೆಯಲ್ಲಿ ಪರಿಸರದಲ್ಲಿ ನಿರ್ಮಾಣಕೊಂಡಿರುವ ವಿದ್ಯುತ್ ಉತ್ಪಾದಕ ಘಟಕಕ್ಕೆ ಕಾರ್ಕಳ ಪುಸಭೆಯು ನವಂಬರ್ ತಿಂಗಳ ಅಂತ್ಯದೊಳಗಾಗಿ ಮುಂಡ್ಲಿ ಕಿರುಅಣೆಕಟ್ಟಿನಿಂದ ನೀರು ಹೊರ ಹರಿಯದಂತೆ ಹೈಡ್ರೋಲಿಕ್ ಗೇಟ್ ಹಾಕಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಮುಂಡ್ಲಿ ಕಿರು ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಏಕಾಏಕಿ ನೀರಿನ ಪ್ರಮಾಣ ಕುಸಿಯಲಾರಂಭಿಸಿ ಕೇವಲ 4 ಅಡಿ ಎತ್ತರ ಮಾತ್ರ ನೀರು ಶೇಖರಣೆಗೊಂಡಿತ್ತು. ಆ ಅವಧಿಯಲ್ಲಿ 2 ದಿನಗಳಿಗೊಮ್ಮೆ ನೀರು ಸರಬರಾಜಿಗೂ ಪುರಸಭೆ ಮುಂದಾಗಿತ್ತು. ಆದರೆ ಪ್ರಸಕ್ತವಧಿಯಲ್ಲಿ ಕುಡಿಯುವ ನೀರಿನ ತಾತ್ವಾರ ಎದುರಾಗದ ಹಿನ್ನಲ್ಲೆಯಲ್ಲಿ ಮುಂಡ್ಲಿಯಿಂದ ರಾಮಸಮುದ್ರದಲ್ಲಿ ನಿರ್ಮಿಸಲಾಗಿರುವ ನೀರಿನ ಟ್ಯಾಂಕ್ ಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
1994ರಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ದುರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡ್ಲಿ ಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ಕಿಂಡಿಅಣೆಕಟ್ಟನ್ನು ನಿರ್ಮಿಸಲಾಗಿತ್ತು.