ಮಂಗಳೂರು, ಜ 19(DaijiworldNews/AA): ರಾಜಣ್ಣನಂತವರ ಮಾತು ರಾಮ ಮಂದಿರಕ್ಕೆ ಅವಶ್ಯಕತೆ ಇಲ್ಲ. ಅವರು ನೀಡಿರುವ ಹೇಳಿಕೆಗಳು ಈ ದೇಶದ ಬಹುಸಂಖ್ಯಾತ ಹಿಂದೂಗಳಿಗೆ, ರಾಷ್ಟ್ರ ಮಂದಿರಕ್ಕೆ ಮಾಡಿರುವ ಅಪಮಾನ ಎಂದು ಸಂಸದ ನಳಿನ್ ಕುಮಾರ್ ಕಟೀಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ರಾಮ ಮಂದಿರದ ಕುರಿತು ಸಚಿವ ರಾಜಣ್ಣ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಈ ಸಂದರ್ಭದಲ್ಲಿ ಸಚಿವ ರಾಜಣ್ಣನವರ ಮೂರ್ಖತನದ ಹೇಳಿಕೆ, ಕಾಂಗ್ರೆಸ್ ನ ಮಾನಸಿಕತೆಯನ್ನು ತೋರಿಸುತ್ತದೆ ಎಂದರು.
ಅಯೋಧ್ಯೆಯ ರಾಮ ಮಂದಿರವನ್ನು ಟೂರಿಂಗ್ ಟಾಕೀಸ್ ಗೆ ಹೋಲಿಸುವಂತದ್ದು, ಅದರ ಬಗ್ಗೆ ಕೀಳಾಗಿ ಮಾತನಾಡುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ರಾಜಣ್ಣ ಅಧಿಕಾರದ ದಾಹಕ್ಕೋಸರ, ಅಧಿಕಾರದ ಸ್ಥಾನಕ್ಕೋಸ್ಕರ ಈ ರೀತಿಯ ಹೇಳಿಕೆ ನೀಡಿ ಕಾಂಗ್ರೆಸ್ ನ ಹೈಕಮಾಂಡ್ ಅನ್ನು ಮೆಚ್ಚಿಸುವ ಕೆಲಸ ಮಾಡಿದ್ದಾರೆ. ರಾಜಣ್ಣನ ಹೇಳಿಕೆ ರಾಷ್ಟ್ರ ವಿರೋಧಿ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಮನನ್ನು ನಾವು ದೇವರೆಂದು ಪೂಜಿಸುವುದಕ್ಕಿಂತ ಹೆಚ್ಚು ಈ ದೇಶದ ಸಾಂಸ್ಕೃತಿಕ ರಾಯಭಾರಿ ಎಂದು ಪರಿಗಣಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
ಅಯೋಧ್ಯೆಯ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್ ಟೀಕೆಗಳನ್ನು ಮಾಡಿತ್ತು. ರಾಮನ ಹುಟ್ಟಿನ ಬಗ್ಗೆ ಪ್ರಶ್ನೆಯನ್ನ ಮಾಡಿತ್ತು. ಕಾಂಗ್ರೆಸ್ ಗೆ ಈ ದೇಶದ ಮೇಲೆ ಗೌರವವಿಲ್ಲ. ಈ ದೇಶದ ಆದರ್ಶ ಪುರುಷರಗಳ ಮೇಲೆ ನಂಬಿಕೆ ಇಲ್ಲದ ಪಕ್ಷ ಕಾಂಗ್ರೆಸ್. ಕೇವಲ ಮತದ ಆಸೆಗೋಸ್ಕರ ತುಷ್ಟೀಕರಣದ ನೀತಿಯನ್ನು ಕಾಂಗ್ರೆಸ್ ಅವಲಂಬಿತವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಯಾಕೆ? ಟಾಯ್ಲೆಟ್ ಕಟ್ಟಿ ಎಂದು ಹೇಳಿದ್ದು ಕಾಂಗ್ರೆಸ್ ಎಂದು ಕಿಡಿಕಾರಿದ್ದರು.