ಮಂಗಳೂರು, ಜ 19(DaijiworldNews/RA): ಸ್ಟೇಟ್ ಬ್ಯಾಂಕ್ನಲ್ಲಿ 4.2 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಲವು ವರ್ಷಗಳ ಹಿಂದೆ ಸರ್ವೀಸ್ ಬಸ್ ನಿಲ್ದಾಣದ ಫೇಸ್ ಲಿಫ್ಟ್ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ವರ್ಷಗಳೇ ಕಳೆದರೂ ಬಸ್ ನಿಲ್ದಾಣದ ಕಾಮಗಾರಿ ಅಪೂರ್ಣವಾಗಿದೆ. ಹೀಗಾಗಿ ಬಸ್ ತಂಗುದಾಣದ ಮೇಲ್ಛಾವಣಿ ಸಂಪೂರ್ಣ ಹಾಳಾಗಿದ್ದು ಪ್ರಯಾಣಿಕರು ಬಸ್ಗಳಿಗಾಗಿ ಕಾಯಲು ಪರದಾಡುವಂತಾಗಿದೆ.
ಸರ್ವಿಸ್ ಬಸ್ ನಿಲ್ದಾಣದಲ್ಲಿ ಐದು ಬಸ್ ತಂಗುದಾಣಗಳು ಇವೆ. ಹೊಸದಾಗಿ ನಿರ್ಮಿಸಲಾದ ಮೇಲ್ಛಾವಣಿಯೊಂದಿಗೆ ಕೇವಲ ಎರಡು ಬಸ್ ಶೆಲ್ಟರ್ಗಳು ಮಾತ್ರ ಇವೆ. ಆದರೆ ಇತರ ಮೂರು ಬಸ್ ನಿಲ್ದಾಣಗಳು ಬಹಳ ವರ್ಷಗಳಿಂದ ನಿರುಪಯುಕ್ತವಾಗಿದೆ.
ಇನ್ನು ಕಂಡಕ್ಟರ್, ಚಾಲಕರು ಹಲವಾರು ಬೇಡಿಕೆಗಳನ್ನು ಸಲ್ಲಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸರ್ವಿಸ್ ಬಸ್ ನಿಲ್ದಾಣದಲ್ಲಿ ಮೇಲ್ಛಾವಣಿ ಅಳವಡಿಸದೆ ನಿರ್ಲಕ್ಷ್ಯ ವಹಿಸಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ಛತ್ರಿ ಅಥವಾ ಟವೆಲ್ಗಳನ್ನು ಹಿಡಿದುಕೊಂಡು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ತಂಗುದಾಣಕ್ಕೆ ಹಾಕಿರುವ ಟೈಲ್ಸ್ ಕೂಡ ಸಂಪೂರ್ಣ ಹಾಳಾಗಿದ್ದು ಕಾಮಗಾರಿಯ ಅಪೂರ್ಣ ಹಾಗೂ ಗುಣಮಟ್ಟವನ್ನು ತೋರಿಸುತ್ತಿದೆ. ಮೇಲ್ಛಾವಣಿ ಇಲ್ಲದ ಬಸ್ ಶೆಲ್ಟರ್, ಬಸ್ ತಂಗುದಾಣದ ಲೇನ್ನಲ್ಲಿ ಚೂಪಾದ ಕಬ್ಬಿಣದ ಗ್ರಿಲ್ಗಳು ಅಪಾಯವನ್ನು ಉಂಟು ಮಾಡುತ್ತಿದೆ. ಬಸ್ ಚಾಲಕರು, ಕಂಡಕ್ಟರ್ಗಳು ಸರ್ವಿಸ್ ಬಸ್ ನಿಲ್ದಾಣದ ಸರ್ವಾಂಗೀಣ ಅಭಿವೃದ್ಧಿಗೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಅಧಿಕಾರಿಗಳ ಕಿವಿಗೆ ಬಿದ್ದಿಲ್ಲ. ಸದ್ಯ ಸರ್ವಿಸ್ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ಸಂಬಂಧಪಟ್ಟ ಆಡಳಿತಾಧಿಕಾರಿಗಳು ಕೈಗೆತ್ತಿಕೊಂಡರೆ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ.