Karavali
'ಉಡುಪಿಯ ಸಾಂಸ್ಕೃತಿಕ ಶ್ರೀಮಂತಿಕೆ ವಿಶ್ವಕ್ಕೇ ಮಾದರಿ' - ಪುತ್ತಿಗೆ ಪರ್ಯಾಯೋತ್ಸವದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್
- Thu, Jan 18 2024 02:31:24 PM
-
ಉಡುಪಿ, ಜ 18 (DaijiworldNews/HR): ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಉಡುಪಿಯ ಶ್ರೀಮಂತಿಕೆ ಇಡೀ ವಿಶ್ವಕ್ಕೇ ಮಾದರಿ. ಪುತ್ತಿಗೆ ಶ್ರೀಗಳು ವಿದೇಶಗಳಲ್ಲಿ ಶಾಖಾಮಠಗಳನ್ನು ಸ್ಥಾಪಿಸಿ, ವಿದೇಶಿಯರಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ನಡೆದ ಶ್ರೀ ಪುತ್ತಿಗೆ ಪರ್ಯಾಯೋತ್ಸವ ಕಾರ್ಯಕ್ರಮದ ದರ್ಬಾರ್ ಸಭೆಯಲ್ಲಿ ಮಾತನಾಡಿದ ಸಚಿವರು, ಉಡುಪಿ ಪರ್ಯಾಯ ಕಾರ್ಯಕ್ರಮ ನೋಡಿ ನಿಜಕ್ಕೂ ಬೆರಗಾದೆ. ಸಾಂಸ್ಕೃತಿಕವಾಗಿ ಸಾಕಷ್ಟು ಶ್ರೀಮಂತಿಕೆ ಹೊಂದಿದೆ. ಶ್ರೀ ಪುತ್ತಿಗೆ ಪರ್ಯಾಯೋತ್ಸವದ ಅಂಗವಾಗಿ ನಡೆದ ಮೆರವಣಿಗೆ ಹಾಗೂ ಕಾರ್ಯಕ್ರಮವನ್ನು ನೋಡಿದರೆ, ಮೈಸೂರು ದಸರಾದ ವೈಭವ ನನಗೆ ನೆನಪಾಯಿತು. ಇದನೆಲ್ಲಾ ನೋಡಿದರೆ ಸಾಂಸ್ಕೃತಿಕವಾಗಿ ಭಾರತ ಸಾಕಷ್ಟು ಶ್ರೀಮಂತವಾಗಿದೆ. ಭಾರತ ಸಾಂಸ್ಕೃತಿಕವಾಗಿ ವಿಶ್ವಗುರು ಆಗುವ ಪಥದತ್ತ ಸಾಗಿದೆ. ಪುತ್ತಿಗೆ ಪರ್ಯಾಯೋತ್ಸವಕ್ಕೆ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿದೆ. ಪರ್ಯಾಯ ಕಾರ್ಯಕ್ರಮ ಮುಗಿಯುವವರೆಗೂ ಜಿಲ್ಲಾಡಳಿತ ಸಂಪೂರ್ಣ ಸಹಕಾರವನ್ನು ನೀಡಲಿದೆ. ಪರ್ಯಾಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಪೂರ್ವ ಅವಕಾಶವನ್ನು ಮಿಸ್ ಮಾಡಬಾರದು ಎಂಬ ಕಾರಣಕ್ಕಾಗಿ ಕುಟುಂಬ ಸಮೇತ ಆಗಮಿಸಿ ಭಾಗವಹಿಸುತ್ತಿದ್ದೇನೆ. ದೇಶದ ಪ್ರಸಿದ್ಧ ತೀರ್ಥಕ್ಷೇತ್ರವಾದ ಉಡುಪಿ ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ. ಇಂತಹ ಜಿಲ್ಲೆಗೆ ಉಸ್ತುವಾರಿ ಸಚಿವೆಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ನನ್ನ ಪಾಲಿಗೆ ಬಂದಿದೆ ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಮಾತನಾಡಿ “ಇದೊಂದು ಅತೀವ ಪಾವಿತ್ರ್ಯತೆಯಿಂದ ಕೂಡಿದ ಕಾರ್ಯಕ್ರಮ, ಕಾರ್ಯಕ್ರಮದಲ್ಲಿ ಭಾಗವಹಿಸಿಸುವುದು ದೇವರೇ ನನಗೆ ನೀಡಿದ ಭಾಗ್ಯ. ಪುತ್ತಿಗೆ ಮಠದ ಪರ್ಯಾಯ ಕಾರ್ಯಕ್ರಮ ಧಾರ್ಮಿಕ, ಸಾಂಸ್ಕ್ರತಿಕ ಚಿಂತನೆಯ ಕಾರ್ಯಕ್ರಮ. ಭವಿಷ್ಯದ ಪೀಳಿಗೆಗೆ ನಮ್ಮ ಸಂಸ್ಕ್ರತಿಯನ್ನು ಹಸ್ತಾಂತರಿಸುವ ಮತ್ತು ಪರಿಚಯಿಸುವ ಕಾರ್ಯಕ್ರಮ ಕೂಡಾ ಆಗಿದೆ. ಈ ಕ್ಷೇತ್ರ ನಮಗೆ ಶಕ್ತಿ ಕೇಂದ್ರ ಆಗಲಿ. ಸಮಾಜದಲ್ಲಿ ತಪ್ಪುಗಳಾದಾಗ ಅದನ್ನು ತಿದ್ದು ಕಾರ್ಯವನ್ನು ಸ್ವಾಮೀಜಿಗಳು ಮಾಡಿ ಬಲಿಷ್ಟ ಭಾರತ ನಿರ್ಮಾಣದಲ ಕನಸು ನನಸಾಗಿಸಲಿ. ಇದಕ್ಕೆ ಪುತ್ತಿಗೆ ಸ್ವಾಮೀಜಿಯವರು ದಾರಿದೀಪವಾಗಲಿ” ಎಂದರು.
ಕಾರ್ಯ್ರಕಮದಲ್ಲಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಂಜೆ ಮಾತನಾಡಿ “ಪುತ್ತಿಗೆ ಪರ್ಯಾಯದಲ್ಲಿ ಪ್ರಥಮ ಬಾರಿಗೆ ದೇಶ ವಿದೇಶದಿಂದಲೂ ಭಕ್ತರು ಆಗಮಿಸಿದ್ದಾರೆ. ಪುತ್ತಿಗೆ ಶ್ರೀಗಳು ಕಟ್ಟಳೆಗಳ ಗಡಿಗಳನ್ನು ದಾಟಿ ದೇಶ ವಿದೇಶದಲ್ಲಿ ಭಾರತೀಯತೆಯನ್ನು ಪಸರಿಸುತ್ತಿದ್ದಾರೆ. ಉಡುಪಿ ಮತ್ತು ಉತ್ತರ ಭಾರತಕ್ಕೆ ಅವಿನಾಭಾವ ಸಂಭಂಧ ಇದೆ. ಬಾಲ ರಾಮನಿಗೆ ಅಯೋಧ್ಯೆಯಲ್ಲಿ ಪ್ರತಿಷ್ಟಾಪಿಸುವ ಸಂಧರ್ಭದಲ್ಲಿಯೇ ಇಲ್ಲಿ ಬಾಲ ಕೃಷ್ಣನಿಗೆ ಪರ್ಯಾಯದ ಸಂಭ್ರಮ ನಡೆಯುತ್ತಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಮಾತನಾಡಿ “ಹಲವು ವರ್ಷಗಳ ಬಳಿಕ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಪೂರ್ವ ಜನ್ಮದ ಪುಣ್ಯದ ಫಲದಿಂದ ಪರ್ಯಾಯದಲ್ಲಿ ಭಾಗಿಯಾದೆ. ಅಯೋಧ್ಯೆ ಯಲ್ಲಿ ರಾಮನ ಲೋಕಾರ್ಪಣೆ ಆಗುತ್ತಿದೆ. ಉಡುಪಿಯಲ್ಲಿ ಪುತ್ತಿಗೆ ಪರ್ಯಾಯ ಮೂಲಕ ಕೃಷ್ಣ ಪೂಜೆ ಆಗಲಿದೆ. ಎರಡು ಧಾರ್ಮಿಕ ಕಾರ್ಯಕ್ರಮ ಜೊತೆ ಜೊತೆಗೇ ನಡೆಯುತ್ತಿರೋದು ಸಂತಸವಾಗಿದೆ” ಎಂದರು.
ವಿಶ್ವಗೀತಾ ಪರ್ಯಾಯ ಪುತ್ತಿಗೆ ಪರ್ಯಾಯ 2024 ರಲ್ಲಿ ಭಾಗವಹಿಸಿಲು ಜಪಾನ್ ನಿಂದ ಆಗಮಿಸಿದ ರೆವರೆಂಡ್ ಕೋಶೋ ನಿವಾನೋ, ಅಧ್ಯಕ್ಷರು ರಿಶ್ಯೋ ಕೋಸಿ ಕ್ಯಾಯ ಜಪಾನ್ ದರ್ಬಾರ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿ “ಉಡುಪಿಯ ಪ್ರತಮ ಭೇಟಿಯಲ್ಲಿಯೇ ನಾನು ಇಲ್ಲಿನ ದೈವಿಕ ಸ್ಪರ್ಶದ ಅನುಭವಕ್ಕೆ ಒಳಗಾಗಿದ್ದೇನೆ, ಪರ್ಯಾಯದ ಆಧ್ಯಾತ್ಮಿಕ ಮೌಲ್ಯಗಳನ್ನು ನಾನು ಸ್ವತಹ ಕಂಡಿದ್ದೇನೆ. ಪುತ್ತಿಗೆ ಸ್ವಾಮೀಜಿಯವರು ಅಂತಾರಷ್ಟ್ರೀಯ ಮಟ್ಟದಲ್ಲಿ ಧರ್ಮ ಶಾಂತಿಗಾಗಿ ಹಲವಾರು ಕಾರ್ಯಗಳನ್ನು ನಡೆಸುತಿದ್ದಾರೆ. ಹಿಂದುತ್ವ ಎನ್ನುವುದು ಮಾನವೀಯತೆಯ ಅಮೂಲ್ಯ ಉಡುಗೊರೆ. ಹಿಂದುತ್ವ ಮತ್ತು ಬೌದ್ದ ಧರ್ಮ ಎರಡೂ ಅಕ್ಕ ತಂಗಿಯರಂತೆ ಇದೇ ಭಾರತೀಯತೆಯ ಮೂಲದಿಂದ ಬಂದಿದೆ” ಎಂದರು.
ಕಾರ್ಯಕ್ರಮದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು “ವಿಶ್ವ ಘೀತಾ ಪರಿವ್ರಾಜಕಾಹಾ” ಬಿರುದಿನೊಂದಿಗೆ ಕೇಂದ್ರೀಯ ಸಂಸ್ಕ್ರತಿ ವಿಶ್ವವಿದ್ಯಾನಿಲಯವು ಸನ್ಮಾನಿಸಿತು. ಪುತ್ತಿಗೆ ಮಠದ ವತಿಯಿಂದ ದರ್ಬಾರ್ ಸನ್ಮಾನ ಕಾರ್ಯಕ್ರಮ ಕೂಡಾ ಇದೆ ಸಂಧರ್ಭದಲ್ಲಿ ನಡೆಯಿತು. ಹಿರಿಯ ವಿದ್ವಾಂಸರಾದ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯ, ವಿದ್ವಾನ್ ಕೇಶವ ರಾವ್ ತಾಡಪತ್ರಿ, ವಿದ್ವಾನ್ ಡಾ ಎನ್ ವೆಂಕಟೇಶಾಚಾರ್ಯ, ಹಿರಿಯ ಸಂಶೋಧರಾದ ಶತಾಔಧಾನಿ ವಿದ್ವಾನ್ ರಾಮನಾಥ ಆಚಾರ್ಯ, ಪ್ರಸಿದ್ದ ಜ್ಯೋತಿಷಿಗಳಾದ ವಿದ್ವಾನ ಬೇಳ ಪದ್ಮನಾಭ ಶರ್ಮ, ಇಸ್ಕಾನ್ ಅಧ್ಯಕ್ಷರಾದ ಮಧು ಪಂಡಿತದಾಸ್, ಇಸ್ಕಾನ್ ಅಂತರಾಷಷ್ಟ್ರೀಯ ಅಧ್ಯಕ್ಷರಾದ ರೇಮತೀರಮಣ್ ದಾಸ್, ಮಣಿಪಾಲ ಹಾಸ್ಪಿಟಲ್ಸ್ ಗ್ರೂಫ್ ಚೇರ್ಮನ್ ಡಾಕ್ಟರ್ ರಂಜನ್ ಪೈ, ಹಿರಿಯ ನ್ಯಾಯವಾದಿಗಳಾದ ಅಶೋಕ್ ಹಾರ್ನಹಳ್ಳಿ, ಕೋಕಿಲ ವೇಮುರಿ, ಮಹಾಂತೇಶ್ ಸಣ್ಣನವರ್ ಇವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.
ತಮ್ಮ ಆಶೀರ್ವಚನದಲ್ಲಿ ಮಾತನಾಡಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು “ನಿಖರ ಶ್ರದ್ದೆ ಇರುವವರಿಗೆ ಮಾತ್ರ ಪರ್ಯಾಯದಲ್ಲಿ ಭಾಗವಹಿಸಲು ಸಾಧ್ಯ. ನಾವು ನಮ್ಮ ಪರ್ಯಾಯವನ್ನು ವಿಶ್ವಗೀತಾ ಪರ್ಯಾಯ ಎಂದು ಕರೆದಿದ್ದೇವೆ ಅದರಂತೆಯೇ ಇಂದು ನನಗೆ ವಿಶ್ವಪ್ರಿಯ ತೀರ್ಥ ಶ್ರೀಪಾದರು ಅಧಿಕಾರ ಹಸ್ತಾಂತರ ಮಾಡಿದ್ದಾರೆ, ಇದು ಕೂಡಾ ಒಂದು ಸುಯೋಗ. ಕೃಷ್ಣನ ಸೇವೆ ನಮ್ಮ ಜೀವನದಲ್ಲಿ ಬಂದಿರುವ ಸುವರ್ಣಾವಕಾಶ. ಕೃಷ್ಣನ ಸೇವೆಯ ವಕಾಶವನ್ನು ನಾವು ಯಾವುದೇ ಕಾರಣಕ್ಕೂ ತಪ್ಪಿಸುವುದಿಲ್ಲ, ಇದು ಯಾವತ್ತಿಗೂ ಪ್ರಧಾನ. ಹೀಗಾಗಿ ಪರಪಂಚದ ಎಲ್ಲಾ ಕಾರ್ಯಗಳನ್ನು ಬದಿಗೊತ್ತಿ ನಾವು ಕೃಷ್ಣ ಸೇವೆ ಮಾಡಲು ನಿಂತಿದ್ದೇವೆ. ನಮ್ಮ ದೈನಂದಿನ ಚಟುವಟಿಕೆಯಲ್ಲಿ ಕೂಡಾ ಪೂಜೆ ಅನುಷ್ಟಾನ ಉಳಿದ ಸಮಯದಲ್ಲಿ ಇತರ ಕೆಲಸಗಳನ್ನು ಮಾಡಲಿದ್ದೇವೆ. ದೇವರನ್ನು ಸರ್ವಸ್ವ ದು ತಿಳಿದರೆ ಯಾವುದೇ ಕಾರಣಕ್ಕೂ ಪಶ್ವಾತ್ತಾಪ ಪಡುವ ಅಗತ್ಯ ಇಲ್ಲ. ಭಗವಂತನ ಸಂಭಂದವನ್ನು ನಾವು ಜೀವನದಲ್ಲಿ ದೃಡ ಪಡಿಸುತ್ತಾ ಹೋದರೆ ನಾವು ಎಲ್ಲಿ ಹೋಧರೂ ಕೂಡಾ ಆ ಸಂಬಂಧ ಶಾಶ್ವತವಾಗಿ ಉಳಿಯುತ್ತದೆ. ನಾನು ಸನ್ಯಾಸ ದೀಕ್ಷೆ ಪಡೆದು ಪ್ರಸ್ತುತ 50 ವರ್ಷರ್ಗಳು ತುಂಬುತಿದ್ದು ಇದರ ನೆನಪಿಗಾಗಿ ಕೃಷ್ಣನಿಗೆ ಪಾರ್ಥ ಸಾರಥಿ ಸುವರ್ಣ ರಥವನ್ನು ನೀಡುವ ಸಂಕಲ್ಪ ಮಾಡಿದ್ದೇವೆ. ಕೋಟಿ ಗೀತಾ ಲೇಖನ ಯಜ್ಷದ ಸಂಕಲ್ಪ ಕೂಡಾ ಇದೆ” ಎಂದರು.
ಸಭೆಯಲ್ಲಿ ಪುತ್ತಿಗೆ ಕಿರಿಯ ಶ್ರೀಪಾದರಾದ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಡಾಕ್ಟರ್ ಡಿ ವಿರೇಂದ್ರ ಹೆಗ್ಗಡೆ, ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ನ್ಯೂಬೌನ್ಸಿಕ್ ಸ್ಟೆಠ್ ಕೆನಡಾ ಶಾಸಕರಾದ ಬೆನ್ವಾ ಬೊರ್ಕಿ, ವಿಧಾನ ಪರಿಷತ್ ಸದಸ್ಯರು ಮಂಜುನಾಥ ಭಂಡಾರಿ, ಭೋಜೆ ಗೌಡ, ಉಡುಪಿ ಜಿಲ್ಲಾಧಿಕಾರಿ ಡಾಕ್ಟರ್ ವಿದ್ಯಾಕುಮಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಸ್ವಾಗತ ಸಮಿತಿ ಅಧ್ಯಕ್ಷರಾದ ಡಾಕ್ಟರ್ ಎಚ್ ಎಸ್ ಬಲ್ಲಾಳ್, ಕಾರ್ಯಾಧ್ಯಕ್ಷ ರಘುಪತಿ ಭಟ್, ಕಾರ್ಯದರ್ಶಿ ಬೆಳಪು ದೇವಿಪ್ರಸಾದ್ ಶೆಟ್ಟಿ, ರಂಜನ್ ಕಲ್ಕೂರ ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಶ್ರೀ ಕೃಷ್ಣನ ಭಕ್ತರು ಉಪಸ್ಥಿತರಿದ್ದರು.