ಮಂಗಳೂರು, ಜ 17 (DaijiworldNews/AA): ಕಡಲನಗರಿ ಮಂಗಳೂರಿನ ರಮಣೀಯ ಸ್ಥಳಗಳಲ್ಲಿ ಫಲ್ಗುಣಿ ನದಿ ತೀರದ ಸುಲ್ತಾನ್ ಬತ್ತೇರಿ ಮತ್ತು ತಣ್ಣೀರು ಬಾವಿ ಕೂಡಾ ಒಂದು. ತಣ್ಣೀರು ಬಾವಿ ಬೀಚ್ ಗೆ ತೆರಳಲು ಸುಲ್ತಾನ್ ಬತ್ತೇರಿಯಿಂದ ದೋಣಿ ಮೂಲಕ ಹೋಗುವುದೇ ಇಲ್ಲಿನ ಪ್ರಮುಖ ಸೊಬಗು. ಹೀಗಾಗಿ ಈ ಪ್ರದೇಶ ಅನೇಕ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಆದರೆ ಈ ಪ್ರಕೃತಿ ಸೌಂದರ್ಯಕ್ಕೆ ಕಪ್ಪು ಚುಕ್ಕಿಯಂತೆ ಕಾಡುತ್ತಿದೆ ಇಲ್ಲಿ ತುಂಬಿ ತುಳುಕುತ್ತಿರುವ ತ್ಯಾಜ್ಯ.
ಸ್ವಚ್ಛ ಸುಂದರವಾಗಿದ್ದು, ತನ್ನ ಸೌಂದರ್ಯದಿಂದ ಜನರನ್ನು ತನ್ನತ್ತ ಸೆಳೆಯಬೇಕಿದ್ದ ಸುಲ್ತಾನ್ ಬತ್ತೇರಿ ಮತ್ತು ತಣ್ಣೀರು ಬಾವಿ ಪ್ರದೇಶವು ಕಸದ ರಾಶಿಯಿಂದ ತುಂಬಿಹೋಗಿದ್ದು, ಈ ಪ್ರದೇಶದ ಸೌಂದರ್ಯವೇ ಹಾಳಾಗಿದೆ. ಇಲ್ಲಿಗೆ ಬರುವ ಜನರು ಅಥವಾ ಪ್ರವಾಸಿಗರರು ಕುಳಿತುಕೊಳ್ಳಲು ನದಿಗೆ ಮುಖವಾಗಿ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. ಆದರೆ ಈ ಪ್ರದೇಶವು ಮದ್ಯದ ಬಾಟಲಿಗಳು, ಟೆಟ್ರಾ ಪ್ಯಾಕ್ಗಳು, ಪ್ಲಾಸ್ಟಿಕ್, ಥರ್ಮಾಕೋಲ್ ತುಂಡುಗಳು, ತೆಂಗಿನ ಚಿಪ್ಪುಗಳು ಮತ್ತು ವೈದ್ಯಕೀಯ ವಸ್ತುಗಳು ಸೇರಿದಂತೆ ಕಸದಿಂದ ಸುತ್ತಮುತ್ತಲಿನ ಸೌಂದರ್ಯ ಹಾಳಾಗಿದೆ.
ದುರದೃಷ್ಟವೆಂದರೆ ಈ ಪ್ರದೇಶದಲ್ಲಿ ಕಸದ ತೊಟ್ಟಿಗಳಿದ್ದರೂ, ಇವುಗಳ ಬಳಕೆಯ ಜ್ಞಾನವಿಲ್ಲದಂತೇ ಪ್ರವಾಸಿಗರು, ಇಲ್ಲಿಗೆ ಬರುವ ವೀಕ್ಷಕರು ಕಸಗಳನ್ನು ಸಿಕ್ಕಸಿಕ್ಕಲ್ಲಿ ಹಾಗೂ ಫಲ್ಗುಣಿ ನದಿಗೆ ಎಸೆದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದಾರೆ. ಇದರೊಂದಿಗೆ ಸುಲ್ತಾನ್ ಬತ್ತೇರಿ ಸುತ್ತಮುತ್ತಲಿನ ವಾಣಿಜ್ಯ ಪ್ರದೇಶದಲ್ಲಿ ನಿಯಮಿತವಾಗಿ ಸಂಗ್ರಹವಾಗುವ ತ್ಯಾಜ್ಯವನ್ನು ನದಿಗೆ ತಂದು ಸುರಿಯಲಾಗುತ್ತಿದೆ.
ಈ ಕುರಿತು ಪರಿಸರವಾದಿಗಳಾದ ಜೀತ್ ಮಿಲನ್ ರೋಚೆ, ದಿನೇಶ್ ಹೊಳ್ಳ, ಕಾರ್ಯಕರ್ತ ನಾಗರಾಜ್ ಮತ್ತು ಮಾಲಿನ್ಯ ವಿರೋಧಿ ಅಭಿಯಾನ (ಎಪಿಡಿ) ನಿರಂತರವಾಗಿ ಕಸ ಸುರಿಯುವುದರಿಂದ ಆಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಬರುತ್ತಿದ್ದಾರೆ. ಇದರೊಂದಿಗೆ ತಪ್ಪಿತಸ್ಥರಿಗೆ ಶಾಶ್ವತ ದಂಡ ವಿಧಿಸುವಂತೆ ಹಾಗೂ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳುವಂತೆ ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್, ಸಾರ್ವಜನಿಕರು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಬೇಸರದ ಸಂಗತಿಯಾಗಿದೆ.
ಈ ಬಗ್ಗೆ ದಾಯ್ಜಿವಲ್ಡ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪರಿಸರವಾದಿ ಜೀತ್ ಮಿಲನ್ ರೋಚೆ ಅವರು, "ನೇತ್ರಾವತಿ ಮತ್ತು ಫಲ್ಗುಣಿಯಂತಹ ನದಿಗಳನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ಆದರೆ ವಿಷಾದದ ಸಂಗತಿ ಎಂದರೆ ಮದ್ಯದ ಬಾಟಲಿಗಳು, ಸ್ಯಾನಿಟರಿ ಪ್ಯಾಡ್ಗಳು, ಮಿಶ್ರ ತ್ಯಾಜ್ಯ ಮತ್ತು ವಸ್ತುಗಳ ಅಸಮರ್ಪಕ ವಿಲೇವಾರಿಯಿಂದ ಅವು ಕಲುಷಿತಗೊಳ್ಳುತ್ತಿವೆ. ನದಿಯನ್ನು ಶುದ್ಧೀಕರಣ ಮಾಡುವಾಗ ವೈದ್ಯಕೀಯ ವಸ್ತುಗಳು ಸೇರಿದಂತೆ, ಅವಧಿ ಮೀರಿದ ಔಷಧಿಗಳ ಬಾಕ್ಸ್ಗಳು ದೊರೆಯುತ್ತದೆ. ನಮ್ಮ ನದಿಗಳ ಸ್ವಚ್ಛತೆಯನ್ನು ಕಾಪಾಡುವುದು ಮುಖ್ಯವಾಗಿದೆ. ನದಿಯಲ್ಲಿನ ನೀರನ್ನು ಪ್ರಯೋಗಾಲಕ್ಕೆ ಕಳುಹಿಸಿದಾಗ, ಆ ನೀರು ನದಿಯ ನೀರು ಅಲ್ಲವೆಂಬಂತೆ ಪರೀಕ್ಷಾ ವರದಿಗಳು ಬರುತ್ತವೆ. ಅಧಿಕಾರಿಗಳು ನಮ್ಮ ಜಲಮೂಲಗಳನ್ನು ಕಲುಷಿತಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಸಿರು ಮತ್ತು ಸ್ವಚ್ಛ ನಗರವನ್ನು ಉತ್ತೇಜಿಸಲು ಕಠಿಣ ದಂಡವನ್ನು ವಿಧಿಸಬೇಕು ಎಂದರು.
ಇನ್ನು "ಮ್ಯಾಂಗ್ರೋವ್ ಇರುವ ಜಾಗದಲ್ಲಿ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಇದು ಮೀನುಗಳಿಗೆ ಸಂತಾನಾಭಿವೃದ್ಧಿ ಕೇಂದ್ರವಾಗಿರುವುದರಿಂದ ತ್ಯಾಜ್ಯ ಎಸೆದು ನೀರು ಮಾಲಿನ್ಯವಾಗುವ ಕಾರಣದಿಂದಾಗಿ ಮೀನಿನ ಸಂತಾನೋತ್ಪತ್ತಿಗೆ ತೊಡಕಾಗುತ್ತಿದೆ. ಆದ್ದರಿಂದ ನಾವು ಈ ಸಮಸ್ಯೆಯನ್ನು ಗುರುತಿಸಿ ಶೀಘ್ರವೇ ಪರಿಹರಿಸುವುದು ಕಡ್ಡಾಯವಾಗಿದೆ”ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಪ್ರತಿಯೊಬ್ಬರೂ ಸ್ವಚ್ಛ ನಗರವನ್ನು ಬಯಸುತ್ತಾರೆ, ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಆದರೆ ದುರದೃಷ್ಟವೆಂಬಂತೆ, ನಾವು ನಿಯಮಿತವಾಗಿ ಹೆದ್ದಾರಿ ಹಾಗೂ ನದಿಗಳ ಉದ್ದಕ್ಕೂ ಜನರು ಕಸ ಸುರಿಯುವುದನ್ನು ಕಾಣುತ್ತೇವೆ. ಒಳಚರಂಡಿ ವ್ಯವಸ್ಥೆಗೆ ತುರ್ತಾಗಿ ಗಮನ ಕೊಡಬೇಕು. ಮಂಗಳೂರಿನ ಸೌಂದರ್ಯ ಸವಿಯಲು ಬರುವ ಪ್ರವಾಸಿಗರು ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಬದಲು ಈ ರೀತಿಯ ಕಸದ ರಾಶಿಯನ್ನು ಕಂಡಾಗ, ನಗರದ ಬಗ್ಗೆ ನಕಾರಾತ್ಮಕ ಅನಿಸಿಕೆ ಅವರಲ್ಲಿ ಮೂಡುತ್ತದೆ. ಈ ತ್ಯಾಜ್ಯಗಳಿಂದ ರೋಗಗಳು ಹರಡುವ ಸಂಭವವೂ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ಮಂಗಳೂರನ್ನು ಸ್ವಚ್ಛ ನಗರವನ್ನಾಗಿ ಕಾಪಾಡಿಕೊಳ್ಳಲು ಕೊಡುಗೆ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ರಶ್ಮಿ ಉಳ್ಳಾಲ್ ಅವರು ದಾಯ್ಜಿವಲ್ಡ್ ಮಾಧ್ಯಮಕ್ಕೆ ತಿಳಿಸಿದ್ದಾರೆ.