ಉಡುಪಿ, ಜ 17 (DaijiworldNews/AA): ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 24 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ, ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಬ್ರಹ್ಮಾವರದ ರಿಕ್ಷಾ ಚಾಲಕ ಕೇಶವ ನಾಯ್ಕ (27) ಶಿಕ್ಷೆಗೆ ಒಳಗಾದ ಆರೋಪಿ.
ಘಟನೆಯ ಹಿನ್ನೆಲೆ
ಸಂತ್ರಸ್ತ ಬಾಲಕಿಯು ಶಾಲೆಗೆ ಆರೋಪಿಯ ರಿಕ್ಷಾದಲ್ಲೇ ಹೋಗಿ ಬರುತ್ತಿದ್ದು, ಇದರಿಂದ ಬಾಲಕಿಯ ಮನೆಯವರಿಗೂ ಬಹಳ ಪರಿಚಿತನಾಗಿದ್ದ. ಈತ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ, 2023ರ ಫೆಬ್ರವರಿ 17ರಂದು ಆಕೆಯನ್ನು ಪುಸಲಾಯಿಸಿ ತನ್ನ ರಿಕ್ಷಾದಲ್ಲಿ ಲಾಡ್ಜ್ ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಆಕೆಯನ್ನು ಅತ್ಯಾಚಾರ ಎಸಗಿ, ಈ ವಿಚಾರವನ್ನು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದ. ಇನ್ನು ಬಾಲಕಿ ಗರ್ಭಿಣಿಯಾದ ಬಳಿಕ ಆಕೆಯನ್ನು ಹೆತ್ತವರು ವಿಚಾರಿಸಿದ್ದು, ಈ ವೇಳೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಬಳಿಕ ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಆಗಿನ ಪೊಲೀಸ್ ನಿರೀಕ್ಷಕ ಜಯಾನಂದ ಕೆ. ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 28 ಸಾಕ್ಷಿಗಳ ಪೈಕಿ ಅಭಿಯೋಜನೆ ಪರವಾಗಿ 16 ಸಾಕ್ಷಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿದ್ದು, ಸಂತ್ರಸ್ತ ಬಾಲಕಿಯ ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿತ್ತು.
ಇನ್ನು ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು, ಆರೋಪಿ ಕೇಶವನನ್ನು ದೋಷಿ ಎಂದು ಪರಿಗಣಿಸಿ, ಅತ್ಯಾಚಾರ ಎಸಗಿರುವುದಕ್ಕೆ 20 ವರ್ಷಗಳ ಕಠಿಣ ಜೈಲುಶಿಕ್ಷೆ ಹಾಗೂ 20 ಸಾವಿರ ರೂ. ದಂಡ, ಬಾಲಕಿಯನ್ನು ಪುಸಲಾಯಿಸಿ ಆಕೆಯ ಹೆತ್ತವರಿಗೆ ಗೊತ್ತಿಲ್ಲದಂತೆ ಕರೆದುಕೊಂಡು ಹೋಗಿರುವುದಕ್ಕೆ 3 ವರ್ಷ ಕಾರಾಗೃಹ ಶಿಕ್ಷೆ ಮತ್ತು 5 ಸಾವಿರ ರೂ. ದಂಡ, ಬಾಲಕಿಗೆ ಬೆದರಿಕೆಯೊಡ್ಡಿರುವುದಕ್ಕೆ 1 ವರ್ಷ ಜೈಲು ಶಿಕ್ಷೆ ಮತ್ತು 1 ಸಾವಿರ ರೂ. ದಂಡ ವಿಧಿಸಿದ್ದಾರೆ. ಒಂದು ವೇಳೆ ಆರೋಪಿ ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿ 6 ತಿಂಗಳ ಶಿಕ್ಷೆ ಮತ್ತು ನೊಂದ ಬಾಲಕಿಗೆ ಪರಿಹಾರವಾಗಿ ಸರಕಾರದಿಂದ 3ಲಕ್ಷ ರೂ. ನೀಡಬೇಕೆಂದು ನ್ಯಾಯಾಲಯ ತೀರ್ಪು ನೀಡಿದೆ.