ಉಡುಪಿ, ಜ 17 (DaijiworldNews/MS): ಉಡುಪಿ ನಗರದ ಹೃದಯ ಭಾಗದಲ್ಲಿ ಅವೈಜ್ಞಾನಿಕ ವಾಗಿ ನಿರ್ಮಿಸಿರುವ ಹಂಪ್ಸ್ ಒಂದು ಇದೀಗ ಅಪಘಾತ ವಲಯವಾಗಿ ಮಾರ್ಪಟ್ಟಿದೆ.
ಉಡುಪಿ ಪರ್ಯಾಯ ಹಿನ್ನಲೆಯಲ್ಲಿ ಉಡುಪಿ ನಗರದ ವಿವಿಧೆಡೆಗಳಲ್ಲಿ ರಸ್ತೆ ರಿಪೇರಿ, ಡಾಮರೀಕರಣ ಕಾಮಗಾರಿ ಕೈಗೊಂಡಿದ್ದು ವಿವಿದೆಡೆ ಅರ್ಧಂಬರ್ಧ ಕಾಮಗಾರಿ ನಡೆಸಲಾಗಿದೆ.
ಇದೇ ಪ್ರಕ್ರಿಯೆಯಲ್ಲಿ ಉಡುಪಿ ನಗರದ ಹೃದಯ ಭಾಗವಾದ ಕೋರ್ಟ್ ಮುಂಭಾಗದ ಕವಿ ಮುದ್ದಣ ಮಾರ್ಗದಲ್ಲಿ ರಸ್ತೆ ಉಬ್ಬು (ಹಂಪ್ಸ್) ಗಳನ್ನು ಅಳವಡಿಕೆ ಮಾಡಲಾಗಿದ್ದು ಇದೀಗ ಈ ಅವೈಜ್ಞಾನಿಕ ವಾಗಿ ನಿರ್ಮಾಣ ಮಾಡಿರುವ ರಸ್ತೆ ಉಬ್ಬು ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಇದು ಉಡುಪಿ ನಗರದ ಅತಿ ಹೆಚ್ಚು ಜನ, ವಾಹನ ಸಂಚಾರ ಇರುವ ಪ್ರಮುಖ ರಸ್ತೆ ಆಗಿದ್ದು ಈ ರಸ್ತೆಯಲ್ಲಿ ಏಕಾಏಕಿಯಾಗಿ ಹಂಪ್ಸ್ ನಿರ್ಮಾಣ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಿನ್ನಿಮುಲ್ಕಿ ಸ್ವಾಗತ ಗೋಪುರದಿಂದ ಆರಂಭವಾಗುವ ಈ ರಸ್ತೆ, ಹಳೆ ತಾಲ್ಲೂಕು ಆಫೀಸ್, ಕಲ್ಪನಾ, ಅಲಂಕಾರ್, ಮುಖೇನ ವಾಗಿ ಸರ್ವಿಸ್ ಮತ್ತು ಸಿಟಿ ಬಸ್ ನಿಲ್ದಾಣಗಳಿಗೆ ಸಾಗುತ್ತಿದೆ. ಸುಮಾರು 3 ಕಿಲೋ ಮೀಟರ್ ಉದ್ದದ ಈ ರಸ್ತೆಯಲ್ಲಿ ಯಾವುದೇ ಕಡೆಗಳಲ್ಲಿ ರಸ್ತೆ ಉಬ್ಬುಗಳು ಇಲ್ಲ, ಆದರೆ ಇದೀಗ ಕೋರ್ಟ್ ಮುಂಭಾಗ ಏಕಾಏಕಿಯಾಗಿ ಯಾವುದೇ ಪೂರ್ವ ತಯಾರಿ ಇಲ್ಲದೆ ಹಂಪ್ಸ್ ಅಳವಡಿಕೆ ಮಾಡಲಾಗಿದೆ.
ಹಂಪ್ಸ್ ಅಳವಡಿಕೆ ಮಾಡಿದ ಮೊದಲ ದಿನವೇ ಇಲ್ಲಿ ಬೈಕ್ ಸವಾರನೋರ್ವ ಹಂಪ್ಸ್ ನ ಅರಿವಿಲ್ಲದೇ ಬಂದು ಸ್ಕಿಡ್ ಆಗಿ ಬಿದ್ದು ತೀವ್ರ ತರದಲ್ಲಿ ಗಾಯಾಳಾಗಿ ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ. ಇದನ್ನು ನಿರ್ಮಿಸಿದ ಬೆರಳೆಣಿಕೆಯ ದಿನಗಳಲ್ಲಿ ಈ ಭಾಗದಲ್ಲಿ ೮ ಅಪಘಾತಗಳು ನಡೆದಿವೆ. ಗುರುವಾರ ರಾತ್ರಿ ಇಲ್ಲಿ ಹಂಪ್ಸ್ ನ ಅರಿವಿಲ್ಲದೇ ಬಂದ ಕಾರೊಂದು ಬಂಪರ್ ಹಂಪ್ ಗೆ ತಾಗಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾದ ಘಟನೆ ಕೂಡಾ ನಡೆದಿದೆ.
ಹೀಗಾಗಿ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿರುವ ಈ ಹಂಪ್ಸ್ ಅನ್ನು ಶೀಘ್ರವೇ ತೆರವು ಮಾಡಬೇಕು ಎಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿ ಬಂದಿದೆ.