ಉಳ್ಳಾಲ, ಜ 16 (DaijiworldNews/HR): ಸಂವಿಧಾನದಡಿ ಇರುವ ಸರಕಾರದಲ್ಲಿ ಪೊಲೀಸರು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಕೋಮುವಾದಿ ಮುಖಂಡನ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಿದರೆ ಪ್ರಕರಣವನ್ನು ದಾಖಲಿಸುವ ಇಲಾಖೆ, ದಂಧೆಕೋರರು, ಕ್ರಿಮಿನಲ್ ಪಾತಕಿಗಳಿಗೆ ಮಣೆ ಹಾಕುತ್ತಿದೆ. ರಾಷ್ಟ್ರೀಯ ಪಕ್ಷದ ತಾಳ್ಮೆ ಪರೀಕ್ಷಿಸಿದಲ್ಲಿ ಕಮೀಷನರ್ ಕಚೇರಿಗೆ ಮಂಗಳೂರು ಚಲೋ ಹಮ್ಮಿಕೊಳ್ಳುತ್ತೇವೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಮುನೀರ ಕಾಟಿಪಳ್ಳ ಎಚ್ಚರಿಸಿದರು.
ಕಲ್ಲಡ್ಕ ಭಟ್ ವಿರುದ್ಧ ಉಳ್ಳಾಲ ಠಾಣೆಯೆದುರು ಪ್ರತಿಭಟಿಸಿದ ಕಾರ್ಮಿಕ ಮತ್ತು ಡಿವೈಎಫ್ಐ ಮುಖಂಡರ ಮೇಲೆ ಸುಮೋಟೊ ಪ್ರಕರಣ ದಾಖಲಿಸಿರುವ ವಿರುದ್ಧ ಡಿವೈ ಎಫ್ ಐ ಮತ್ತು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಉಳ್ಳಾಲ ತಾಲೂಕು ಸಮಿತಿ ಆಶ್ರಯದಲ್ಲಿ ಇಂದು ಹಮ್ಮಿಕೊಂಡು ಉಳ್ಳಾಲ ಪೊಲೀಸ್ ಠಾಣಾ ಚಲೋ ಕಾರ್ಯಕ್ರಮದಲ್ಲಿ ಠಾಣೆಯೆದುರು ಹಮ್ಮಿಕೊಂಡ ಮುತ್ತಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ಮಾಡದಂತೆ ಅವಕಾಶ ಕೊಡದೇ ಇರುವುದನ್ನು ಗಮನಿಸುವಾಗ ಬ್ರಿಟೀಷ್ ಆಡಳಿತದಲ್ಲಿ ಇರುವಂತೆ ಕಾಣುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರ, ಜಾತ್ಯತೀತತೆ ಸಂವಿಧಾನದಲ್ಲಿ ಇನ್ನೂ ಇದ್ದು, ಮೋದಿಯವರು ತೆಗೆದುಹಾಕಿಲ್ಲ ಅನ್ನುವುದನ್ನು ಪೊಲೀಸರು ಗಮನಿಸಬೇಕು ಎಂದರು.
ಇನ್ನು ಸರಕಾರ ಸಂವಿಧಾನದಡಿಯೇ ಕಾರ್ಯನಿರ್ವಹಿಸುತ್ತಿದೆ, ಈ ಕುರಿತು ಜ್ಞಾನವಿಲ್ಲದ ಪೊಲೀಸರು ಸರ್ವಾಧಿಕಾರಿಗಳು ಎಂದು ಭಾವಿಸಿದ್ದಾರೆ. ಜಿಲ್ಲೆಯ ಎಲ್ಲಾ ಠಾಣೆಗಳ ಮುಂದೆ ಪ್ರತಿಭಟನೆಗಳು ಬೇಕಾದಷ್ಟು ನಡೆದಿದೆ. ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಕಾನೂನಿನ ತಿಳುವಳಿಕೆಯಿಲ್ಲದೆ ಪ್ರತಿಭಟನೆಗಳಿಗೆ ತಡೆಯೊಡ್ಡುತ್ತಿದ್ದಾರೆ. ಪ್ರತಿಭಟನೆಗಳನ್ನು ಹತ್ತಿಕ್ಕಲು ಹೊರಟರೆ ಡಿವೈಎಫ್ಐ ದುಡಿಯುವ ವರ್ಗ, ರೈತ ಶಕ್ತಿಯ ಮೂಲಕ ತಕ್ಕ ಉತ್ತರ ನೀಡುತ್ತದೆ ಅನ್ನುವುದು ತಲೆಯಲ್ಲಿಡಬೇಕಿದೆ ಎಂದಿದ್ದಾರೆ.
ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಗಮಿಸಿದ್ದೇವೆ, ಅಷ್ಟೂ ಜನರ ಪಟ್ಟಿಯನ್ನು ಕೊಡುತ್ತೇವೆ ಪ್ರಕರಣ ದಾಖಲಿಸಿ ಎಂದು ಸವಾಲಸೆದು, ಕಲ್ಲಡ್ಕ ಪ್ರಭಾಕರ್ ಭಟ್ ಪ್ರಶ್ನಾತೀತರೇ ಸಂವಿಧಾನಕ್ಕಿಂತ ದೊಡ್ಡವರೇ? ಶಾಂತಿಯುತವಾಗಿ ಒಂದು ಮೂಲೆಯಲ್ಲಿ ನಿಂತು ಪ್ರತಿಭಟಿಸುವವರ ವಿರುದ್ಧ ಪ್ರಕರಣ ದಾಖಲಿಸುವವರು ಕೋಮುವಾದಿ ಭಟ್ಟರ ವಿರುದ್ಧ ಯಾಕೆ ಪ್ರಕರಣ ದಾಖಲಿಸಿಲ್ಲ?.ಸಂಸದ ಅನಂತ ಕುಮಾರ್ ಹೆಗ್ಡೆ ಮುಖ್ಯಮಂತ್ರಿ ವಿರುದ್ಧ ಮಾತನಾಡಿದಾಗ ಸುಮೋಟೊ ಪ್ರಕರಣ ದಾಖಲಾಗುತ್ತದೆ. ಓರ್ವ ಗ್ರಾ.ಪಂ ಸದಸ್ಯನೂ ಅಲ್ಲದ ಕಲ್ಲಡ್ಕ ಪ್ರಭಾಕರ್ ಭಟ್ ಇಡೀ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳ ವಿರುದ್ಧ ಮಾತನಾಡಿದರೆ ಸುಮೋಟೊ ಕೇಸು ದಾಖಲು ಮಾಡುವುದಿಲ್ಲವೆಂದರೆ, ಪ್ರಜಾಪ್ರಭುತ್ವ ಯಾವ ರೀತಿಯಲ್ಲಿದೆ ಅನ್ನುವುದನ್ನು ಗಮನಿಸಬೇಕಿದೆ. ಜಾಮೀನುರಹಿತ ಪ್ರಕರಣ ದಾಖಲಾದರೂ ಈವರೆಗೆ ಬಂಧನ ಮಾಡಿಲ್ಲ. ಕೋಮುವಾದಿ ಮುಖಂಡನ ವಿರುದ್ಧ ಮಾತನಾಡಬಾರದು ಅನ್ನುವ ಸರಕಾರ- ಪೊಲೀಸ್ ಇಲಾಖೆ ಗೇಣಿದಾರರಿಗೆ ಭೂಮಿ ಕೊಡಿಸಿದ ಧ್ವಜದಡಿಯ ಪಕ್ಷವಿದು, ಲಕ್ಷಾಂತರ ಬೀಡಿ ಕಟ್ಟಿದ ಮಹಿಳೆಯರಿಗೆ ಬೀಡಿ ಪಿಎಫ್, ಬೋನಸ್ಸು ಕೊಡಿಸಿದ ರಾಷ್ಟ್ರೀಯ ಪಕ್ಷ ಅನ್ನುವುದನ್ನು ಮನದಲ್ಲಿಟ್ಟುಕೊಳ್ಳಲಿ. ಈಗ ಧಾರ್ಮಿಕ ಧ್ವಜ ದೊಡ್ಡದಾಗಿರಬಹುದು. ಡಿವೈಎಫ್ ಐ ನಾಯಕರಿಗೆ ಇತಿಹಾಸದ ಪಾಠದ ಅಗತ್ಯವಿಲ್ಲ. ಸಿಪಿಎಂ ಮುಖಂಡ ಕೃಷ್ಣಪ್ಪ ಸಾಲ್ಯಾನ್ ರಂತಹ ಯೋಗ್ಯತೆ ಕಲ್ಲಡ್ಕ ಭಟ್ ಅವರಿಗಿಲ್ಲ ಎಂದರು.
17 ಜನರ ಶಾಂತಿಯುತ ಧರಣಿಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯ ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ರಾಜ್ಯಕ್ಕೆ ಸ್ಪೀಕರ್ ಆಗಿರುವ ಯು.ಟಿಖಾದರ್ ಉಳ್ಳಾಲಕ್ಕೆ ಶಾಸಕರು. ಎಲ್ಲರನ್ನು ಜೋಡಣೆ ಮಾಡುವಲ್ಲಿ ಪರಿಣತರು. ಆದರೆ ತೆರೆಮರೆಯಲ್ಲಿ ಕೆಲಸ ಮಾಡಿದಲ್ಲಿ ಸಂದರ್ಭ ಬಂದಾಗ ಕೋಣಗಳನ್ನು ಓಡಿಸಲು ಡಿವೈಎಫ್ಐ ಕಾರ್ಯಕರ್ತರಿಗೂ ಗೊತ್ತಿದೆ ಎಂದು ಎಚ್ಚರಿಸಿದರು.
ಹಿಂಸೆ, ಉದ್ರಿಕ್ತ ಭಾಷಣಕಾರರ ವಿರುದ್ಧ ಕ್ರಮ ಕೈಗೊಳ್ಳದ ಸರಕಾರ ಶೌರ್ಯ ಯಾತ್ರೆಗೆ ರಸ್ತೆ ಬದಲಾವಣೆ ಮಾಡಿಕೊಡುತ್ತದೆ. ಬಜರಂಗದಳ ಬೆಂಬಲಿತ ಸರಕಾರವಲ್ಲದಿದ್ದರೂ ಇಂತಹ ವಾತಾವರಣವಿರುವುದು ಮುಜುಗರ ವ್ಯಕ್ತಪಡಿಸುವಂತಹದ್ದು ಎಂದರು.
ಸಿಪಿಐಎಂ ಮುಖಂಡ ಸುನಿಲ್ ಕುಮಾರ್ ಬಜಾಲ್, ಡಿವೈ ಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಉಳ್ಳಾಲ ತಾಲೂಕು ಅಧ್ಯಕ್ಷ ರಝಾಕ್ ಮೊಂಟೆಪದವು ಮುಂತಾದವರು ಉಪಸ್ಥಿತರಿದ್ದರು.