ಪುತ್ತೂರು, ಎ23(Daijiworld News/SS): ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೋಲೀಸ್ ಠಾಣೆಯ ಸಿಬ್ಬಂದಿಯಿಂದ ಹಲ್ಲೆಗೊಳಗಾದ ಮಾನಸಿಕ ಅಸ್ವಸ್ಥ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾನಸಿಕ ಅಸ್ವಸ್ಥ ವೃದ್ಧನನ್ನು ಕಡಬ ಆಸುಪಾಸಿನ ನಿವಾಸಿ ರಾಮಣ್ಣ ಗೌಡ ಎಂದು ಗುರುತಿಸಲಾಗಿದೆ.
ಪೋಲೀಸ್ ಏಟಿನಿಂದ ಗಾಯಗೊಂಡು ಅಂಗಡಿಯೊಂದರ ಮುಂದೆ ಬಿದ್ದುಕೊಂಡಿದ್ದ ವೃದ್ಧನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಆರೈಕೆ ನೀಡಿದ್ದಾರೆ. ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ದೌರ್ಜನ್ಯ ನಡೆಸಿದ ಕಡಬ ಪೋಲೀಸ್ ಸಿಬ್ಬಂದಿಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಅಮಾನವೀಯ ಘಟನೆಯನ್ನು ಸಾರ್ವಜನಿಕರು ಖಂಡಿಸಿದ್ದು ವೃದ್ಧನ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ಪಂಪಾಪತಿಯ ವಿರುದ್ಧ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ನೀತಿ ತಂಡದವರು ನಿರ್ಧರಿಸಿದ್ದಾರೆ.
ಕಡಬ ಜಾತ್ರೆಯ ಪ್ರಯುಕ್ತ ದೇವರ ಮೆರವಣಿಗೆ ಕಡಬ ಪೇಟೆಯ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿತ್ತು. ಮಾನಸಿಕ ಅಸ್ವಸ್ಥ ವೃದ್ಧ ವ್ಯಕ್ತಿ ಯಾರಿಗೋ ಬೈಯ್ಯುತ್ತ ಕೈಯಲ್ಲಿ ಕಲ್ಲು ಹಿಡಿದುಕೊಂಡಿದ್ದ ಎನ್ನುವ ಕಾರಣಕ್ಕೆ ಆತನನ್ನು ಲಾಠಿಯಿಂದ ಹೊಡೆದು ಬಿರು ಬಿಸಿಲಿನಲ್ಲಿ ನೆಲಕ್ಕೆ ಕೆಡವಿ ಕಾಲಿನಿಂದ ತುಳಿದಿದ್ದು, ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪೊಲೀಸ್ ಸಿಬ್ಬಂದಿ ಪಂಪಾಪತಿ ಮಾನಸಿಕ ಅಸ್ವಸ್ಥ ವೃದ್ಧ ದಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೋಲೀಸ್ ಹಾಗೂ ಹೋಂಗಾರ್ಡ್ ಗೆ ಕಲ್ಲು ಎಸೆಯಲು ಯತ್ನಿಸಿರುವುದಕ್ಕಾಗಿ ಹಲ್ಲೆ ನಡೆಸಿರುವುದಾಗಿ ಹೇಳಿದ್ದಾರೆ.