ಮಂಗಳೂರು, ಜ 16(DaijiworldNews/PC): ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಸುಮಾರು 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ ಟೇಬಲ್ ರೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾಗಿರುವ ಪೊಲೀಸ್ ಕಾನ್ಸ್ ಟೇಬಲ್ ರನ್ನು ಮಂಜುನಾಥ ಹೆಗ್ಡೆ (41) ಎಂದು ಗುರುತಿಸಲಾಗಿದೆ.
ಕಂಕನಾಡಿ ನಗರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಮಂಜುನಾಥ ಹೆಗ್ಡೆ ಅವರನ್ನು ಮಂಗಳೂರು ನಗರ ಸಿಸಿಆರ್ಬಿ ಘಟಕಕ್ಕೆ ಒಒಡಿ ನೆಲೆಯಲ್ಲಿ ವರ್ಗಾವಣೆಗೊಳಿಸಲಾಗಿತ್ತು. ಅಲ್ಲಿ ಕೆಲಸಕ್ಕೆ ವರದಿ ಮಾಡುವುದಾಗಿ ಹೇಳಿ ಜ.13ರಂದು ಮನೆಯಿಂದ ಹೋಗಿದ್ದರು. ಬಳಿಕ ಮನೆಯವರು ಅವರ ಮೊಬೈಲ್ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಸ್ನೇಹಿತರಲ್ಲಿ, ಪರಿಚಯದವರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
5.6 ಅಡಿ ಎತ್ತರದ, ಗೋಧಿ ಮೈ ಬಣ್ಣದ, ದುಂಡು ಮುಖದ, ಸಪೂರ ಶರೀರದ, ಬಿಳಿ ಹಾಗೂ ಕ್ರೀಂ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. ಇದರ ಮೊದಲೂ ಇವರು ನಾಪತ್ತೆಯಾಗಿದ್ದು ಬಳಿಕ ಮೈಸೂರಿನಲ್ಲಿ ಪತ್ತ್ತೆಹಚ್ಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.