ಕುಂದಾಪುರ, ಜ 15(DaijiworldNews/AK): ಡೀಸೆಲ್ ಹಾಕಲು ಬಂದ ಜೀಪೊಂದು ಪೆಟ್ರೋಲ್ ಬಂಕಿನಲ್ಲಿ ಬೈಕಿಗೆ ತಾಗಿದೆ ಎನ್ನುವ ಕಾರಣಕ್ಕೆ ಮಾತಿಗೆ ಮಾತು ಬೆಳೆದು, ಬಳಿಕ ಮನೆ ಸಮೀಪ ಬಂದು ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಡ್ಕಲ್ ಗ್ರಾಮ ಪಂಚಾಯತ್ ನ ಬೀಸಿನ ಪಾರೆ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ.
ಜಡ್ಕಲ್ ಗ್ರಾಮ ಪಂಚಾಯತ್ ನ ಬೀಸಿನಪಾರೆ ವಾರ್ಡಿನ ಚಂದ್ರಮೋಹನ ನಾಯ್ಕ್ ಎಂಬುವರೇ ಗಂಭಿರ ಗಾಯಗೊಂಡು ಆಸ್ಪತ್ರೆ ಸೇರಿದವರು.
ಚಂದ್ರಮೋಹನ್ ನಾಯ್ಕ್ ಭಾನುವಾರ ಸಂಜೆ ಇಡೂರು ಕುಂಜ್ಞಾಡಿಯಲ್ಲಿರುವ ಪೆಟ್ರೋಲ್ ಬಂಕೊಂದಕ್ಕೆ ಡೀಸೆಲ್ ಹಾಕಿಸಿಕೊಳ್ಳಲು ತಮ್ಮ ಜೀಪಿನಲ್ಲಿ ಹೋಗಿದ್ದರು. ಈ ವೇಳೆ ಬಂಕ್ನಲ್ಲಿ ನಿಲ್ಲಿಸಿದ್ದ ಬೈಕೊಂದಕ್ಕೆ ಚಂದ್ರಮೋಹನ್ ಅವರ ಜೀಪ್ ತಾಗಿದೆಯೆನ್ನಲಾಗಿದೆ. ಆಗ ಚಂದ್ರಮೋಹನ ಬೈಕ್ ಚಾಲಕನಲ್ಲಿ ಕ್ಷಮೆ ಕೇಳಿದ್ದಾರೆ.
ಆದರೆ ಅದನ್ನೇ ಗಂಭಿರವಾಗಿ ತೆಗೆದುಕೊಂಡಿದ್ದ ಬೈಕ್ ಚಾಲಕ ಅವಾಚ್ಯವಾಗಿ ಬೈದು ಗಲಾಟೆ ನಡೆಸಿದ್ದು, ಜೀಪ್ ಚಾಲಕ ಚಂದ್ರಮೋಹನ್ ಡೀಸೆಲ್ ತುಂಬಿಸಿಕೊಂಡು ಬೀಸಿನಪಾರೆಯಲ್ಲಿರುವ ತಮ್ಮ ಮನೆಗೆ ಬಂದಿದ್ದರು. ಬಳಿಕ ಮನೆಯಲ್ಲಿ ಜೀಪ್ ನಿಲ್ಲಿಸಿ ಸಮೀಪದಲ್ಲಿದ್ದ ಅಂಗಡಿಗೆ ಬಂದಿದ್ದ ಸಂದರ್ಭ ಸುಮಾರು 35 ಜನರ ತಂಡವೊಂದು ಬಂದು ಗಂಭೀರ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದು, ಜಾತಿನಿಂದನೆ ಮಾಡಿ ಪರಾರಿಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗಂಭೀರ ಗಾಯಗೊಂಡ ಚಂದ್ರಮೋಹನ್ ನಾಯ್ಕ್ 108 ವಾಹನದಲ್ಲಿ ಬಂದು ರಾತ್ರಿ ಕುಂದಾಪುರ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.