ಉಡುಪಿ, ನ 15: ಹೆಬ್ರಿಯ ಭೋಜ ಶೆಟ್ಟಿ ಹತ್ಯೆ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ನಡೆದಿರುವ ಐದು ನಕ್ಸಲ್ ಚಟುವಟಿಕೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ನೀಲಗುಣಿ ಪದ್ಮನಾಭನನ್ನು ಬುಧವಾರ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.ನ್ಯಾಯಾಲಯಕ್ಕೆ ಹಾಜರಾದ ನಂತರ ನ್ಯಾಯಾಲಯದ ಆವರಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪದ್ಮನಾಬ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ತಾನು ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಕೊಂಡವನು. ತನ್ನ ಮೇಲೆ ಸುಳ್ಳು ಆಪಾದನೆಗಳನ್ನು ಹೊರಿಸಲಾಗಿದೆ. ಸಮಾಜದಲ್ಲಿ ಬಡ ಜನರ ಮೇಲಾಗುವ ಶೋಷಣೆಗಳ ವಿರುದ್ದ ಹೋರಾಟ ನಡೆಸಿದ್ದೇನೆ ನಾನು ನಕ್ಸಲ್ ಗುಂಪಿಗೆ ಸೇರಿಲ್ಲ. ನನ್ನನ್ನು ಈ ಎಲ್ಲಾ ಪ್ರಕರಣದಲ್ಲಿ ಬಲವಂತವಾಗಿ ಭಾಗಿ ಮಾಡಲಾಗಿದೆ. ಕಾನೂನಿನ ಈ ಹೋರಾಟದಲ್ಲಿ ಗೆಲುವು ನನ್ನದೆನ್ನುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ .ಇದೇ ವೇಳೆ ಗೌರಿ ಲಂಕೇಶ್ ಕೊಲೆ ಒಂದು ಉದ್ದೇಶಪೂರ್ವಕವಾಗಿ ನಡೆದ ಕೊಲೆಯಾಗಿದ್ದು, ಗೌರಿ ಲಂಕೇಶ್ ಹಿಂದೂ ಕೋಮುವಾದದ ಸಂಚಿಗೆ ಬಲಿಯಾಗಿದ್ದಾಳೆ ಎಂದು ಆರೋಪಿಸಿದ್ದಾರೆ. ಅಲ್ಲದೆ ನಕ್ಸಲರಿಗೆ ಗೌರಿ ಕೊಲ್ಲಲು ಯಾವುದೇ ಕಾರಣಗಳಿಲ್ಲ ಎಂದು ತಿಳಿಸಿದರು.
ಇನ್ನಿಬ್ಬರು ಆರೋಪಿಗಳಾದ ವೀರಮಣಿ ಮತ್ತು ರಮೇಶ್ ರನ್ನು ಕೂಡಾ ನ್ಯಾಯಲಕ್ಕೆ ಇಂದೇ ಹಾಜರುಪಡಿಸಬೇಕಿತ್ತು. ಆದರೆ ಭದ್ರತಾ ಸಿಬ್ಬಂದಿಗಳ ಕೊರತೆಯಿಂದ ನೀಲಗುಣಿ ಪದ್ಮನಾಭನನ್ನಷ್ಟೇ ನ್ಯಾಯಲಯಕ್ಕೆ ಹಾಜರುಪಡಿಸಲಾಯಿತು.