ಬಂಟ್ವಾಳ, ಜ 14(DaijiworldNews/AK): ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಕಾರು ಡಿಕ್ಕಿಯಾಗಿ ಪರಾರಿಯಾಗಿದ್ದು, ಶಾಸಕರು ಪವಾಡಸದೃಶವಾಗಿ ಅಪಾಯದಿಂದ ಪಾರಾದ ಘಟನೆ ಇಂದು ಮಧ್ಯಾಹ್ನ ಮಂಗಳೂರು ಹೊರವಲಯದ ತೆಂಕ ಎಡಪದವು ಎಂಬಲ್ಲಿ ನಡೆದಿದೆ.
ಶಾಸಕ ರಾಜೇಶ್ ನಾಯ್ಕ್ ಅವರು ಇಂದು ಸಂಕ್ರಮಣದ ಅಂಗವಾಗಿ ಎಡಪದವು ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಾಸು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿರುವ ವೇಳೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಮೂಡಬಿದಿರೆ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರೊಂದು ಶಾಸಕರು ಕಾರಿನತ್ತ ಹೆಜ್ಜೆ ಹಾಕುತ್ತಿದ್ದ ವೇಳೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ, ಕಾರು ಗುದ್ದಿದ ರಭಸಕ್ಕೆ ಶಾಸಕರು ಬಿದ್ದು ಗಾಯವಾಗಿದ್ದು, ಕೂಡಲೇ ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆ ನಡೆಸಿದ್ದಾರೆ.
ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಶಾಸಕರು ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಇದೀಗ ಚಿಕಿತ್ಸೆ ಪಡೆದುಕೊಂಡು ಶಾಸಕರು ಮನೆಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.
ಡಿಕ್ಕಿ ಹೊಡೆದು ಪರಾರಿಯಾದ ಕಾರನ್ನು ಸ್ಥಳೀಯರು ಗುರುಪುರದಲ್ಲಿ ಹಿಡಿದು ಚಾಲಕ ಸಹಿತ ಕಾರನ್ನು ಬಜ್ಪೆ ಪೋಲೀಸರಿಗೆ ಒಪ್ಪಿಸಿದ್ದಾರೆ.ಕಾರು ಚಾಲಕನನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.