ಕುಂದಾಪುರ, ಜ 14(DaijiworldNews/AK): ನಮ್ಮ ಮುಂದೆ ಎರಡೇ ಆಯ್ಕೆಗಳು. ಒಂದು ಕೊಟ್ಟು ಹೋಗುವುದು ಇನ್ನೊಂದು ಬಿಟ್ಟು ಹೋಗುವುದು. ಅದೇ ಕಾರಣಕ್ಕೆ ದುಶ್ಚಟಗಳಿಂದ ದೂರವಿರುವ ಶಿಕ್ಷಣಪೂರಿತ ರಾಮರಾಜ್ಯ ಸ್ಥಾಪನೆ ನಮ್ಮ ಗುರಿಯಾಗಿದೆ ಎಂದು ಹಾಜಿ ಕೆ. ಮೊಹಮ್ಮದ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟೀ ಸಯ್ಯದ್ ಮೊಹಮ್ಮದ್ ಬ್ಯಾರಿ ಹೇಳಿದರು.
ಅವರು ಕೋಡಿಯ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ವಿಶ್ವಶಾಂತಿ ಸಂದೇಶ ಸಾರುವ ಸಾಂಸ್ಕ್ರತಿಕ ಕಾರ್ಯಕ್ರಮ, ಸಂಸ್ಥಾಪಕರ ದಿನಾಚರಣೆ ಮತ್ತು ವಾರ್ಷಿಕೋತ್ಸವ ಹಾಗೂ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್' ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ರಾಷ್ಟ್ರೀಯ ಹೆದ್ದಾರಿ, ಉತ್ತರದಲ್ಲಿ ಅಳಿವೆ ಮತ್ತು ದಕ್ಷಿಣದಲ್ಲಿ ರಸ್ತೆ ಹೊಂದಿರುವ ಕೋಡಿ ಬೀಚ್ ಅಭಿವೃದ್ಧಿಪಡಿಸಬೇಕು, 400 ಕಿ.ಮೀ ದೂರದ ಕಾರವಾರ - ಕಾಸರಗೋಡು ಕರಾವಳಿ ತೀರವನ್ನು ಸಾಂಸ್ಕೃತಿಕ, ಸಾಮಾಜಿಕ, ಆರೋಗ್ಯ, ಪ್ರವಾಸೀ ಮತ್ತು ಆರ್ಥಿಕವಾಗಿ ಅಭಿವೃದ್ಧಿಗೊಳಿಸುವತ್ತ ಸರ್ಕಾರ ಚಿಂತನೆ ನಡೆಸಿ ಮಾಸ್ಟರ್ ಪ್ಲ್ಯಾನ್ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಭಾಪತಿ ಯುಟಿ ಖಾದರ್ ಅವರು ಮಾತನಾಡಿ, ನೀವು ಬಡತನದಲ್ಲಿ ಹುಟ್ಟಬಹುದು ಆದರೆ ಬಡತನದಲ್ಲಿ ಸಾಯಬೇಕು ಎಂದೇನೂ ಇಲ್ಲ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ದೇಶದ ಸತ್ಪ್ರಜೆಗಳನ್ನಾಗಿ ಮಾಡುವ ಮೂಲಕ ನೀವು ಕೂಡ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಬೇಕು. ಆಗ ಮಾತ್ರ ದೇಶ ಸಮೃದ್ಧವಾಗಲಿದೆ ಎಂದು ಹೇಳಿದರು.
ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, ಕರಾವಳಿಯ ವಿದ್ಯಾರ್ಥಿಗಳು ಪುಣ್ಯವಂತರು. ಪ್ರಕೃತಿ ಮಾತೆಯ ಮಡಿಲಿನ ಸ್ವರ್ಗದಲ್ಲಿ ಶಿಕ್ಷಣ ಪಡೆಯುವ ಅವಕಾಶ ಸಿಕ್ಕಿರುವುದು ಅದಕ್ಕೆ ಸಾಕ್ಷಿ. ಕಾರವಾರದಿಂದ ಕಾಸರಗೋಡಿನ ಹೊರಗಿನ ಕರಾವಳಿ ತೀರವನ್ನು ಅಭಿವೃದ್ಧಿಪಡಿಸುವ ಯೋಜನೆಗೆ ರಾಜ್ಯ ಸರ್ಕಾರ ಚರ್ಚಿಸಿ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಸಬ್ಬ ಪಿ ಬ್ಯಾರಿ ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದಲ್ಲಿ ವಿಶೇಷ ಸಾಧನೆ ತೋರಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬ್ಯಾರಿಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸಿದ್ದಪ್ಪ ಕೆ. ಎಸ್, ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಶಮೀರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರೊ.ಹಯವದನ ಉಪಾಧ್ಯ ಮೂಡಸಗ್ರಿ ನಿರೂಪಿಸಿದರು. ಬಳಿಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.