ಕಾರ್ಕಳ, ಜ 13 (DaijiworldNews/HR): ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2024 ಜನವರಿ 21, 22, 23, 24, 25 ಹಾಗೂ 26 ರಂದು ಜರಗಲಿರುವುದು ಎಂದು ಬಸಿಲಿಕಾದ ನಿರ್ದೇಶಕ ಅ.ವಂ. ಆಲ್ಬನ್ ಡಿಸೋಜಾ ಹೇಳಿದರು.
ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಎಲ್ಲಾ ಪೂರ್ವಭಾವಿ ಸಿದ್ಧತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ದರಾಗಿದ್ದೇವೆ. ಶ್ರೀಕ್ಷೇತ್ರಕ್ಕೆ ಆಗಮಿಸುತ್ತಿರುವ ಯಾತ್ರಿಕರ ಭೇಟಿಯು, ಆದ್ಯಾತ್ಮಿಕ ನೆಮ್ಮದಿ. ಮಾನಸಿಕ ಸಂತೃಪ್ತಿ ಹಾಗೂ ಸ್ಮರಣೀಯವಾಗಲೆಂದು ಹಾರೈಸುತ್ತೇವೆ ಎಂದರು.
ಜನವರಿ 26 ರಂದು ಶುಕ್ರವಾರ ಅಸ್ವಸ್ಥರಿಗಾಗಿ ಹಾಗೂ ಮಕ್ಕಳಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು. ಅಸ್ವಸ್ಥರು ಅದೇ ದಿವಸದ ಬಲಿಪೂಜೆಗೆ ಬಂದು ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿಸಿದರು.
ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 45 ಹಾಗೂ ಕನ್ನಡ ಭಾಷೆಯಲ್ಲಿ 3 ಹೀಗೆ ಒಟ್ಟು 48 ದಿವ್ಯ ಬಲಿ ಪೂಜೆಗಳನ್ನು ಅರ್ಪಿಸಲಾಗುವುದು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ, ಬೆಳ್ತಂಗಡಿ, ಪುತ್ತೂರು, ಮಂಗಳೂರು, ಶಿವಮೊಗ್ಗ ಹಾಗೂ ನಮ್ಮಿ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಇಲ್ಲಿಗೆ ಆಗಮಿಸಿ ದಿವ್ಯ ಬಲಿಪೂಜೆಯನ್ನು ಅರ್ಪಿಸುವರು ಎಂಬ ಮಾಹಿತಿ ನೀಡಿದರು.
ಆಧ್ಯಾತ್ಮಕ ಧರ್ಮಗುರು ರೋಮನ್ ಮಸ್ಕರಸ್, ಸಹಾಯಕ ಧರ್ಮ ಗುರು ಲ್ಯಾರಿ ಪಿಂಟೋ, ಆಡಳಿತ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿ ಸಿಲ್ವ, ಕಾರ್ಯದರ್ಶಿ ರೊನಾಲ್ಡ್ ನೊರೊನ್ಹಾ, ಪಾಲನಾ ಮಂಡಳಿಯ ಸದಸ್ಯರುಗಳಾದ ವಂದೀಶ್ ಮಥಾಯಿಸ್, ಪ್ರಕಾಶ್ ಪಿಂಟೋ, ರಿತೇಶ್ ಪಿಂಟೋ ರೋಶನ್ ಸಾಲಿಸ್ ಮೊದಲಾದವರು ಉಪಸ್ಥಿತರಿದ್ದರು.