ಕೊಣಾಜೆ, ಜ 13 (DaijiworldNews/HR): ಮಂಗಳೂರು ವಿಧಾನ ಸಭಾ ಕ್ಷೇತ್ರ, ಉಳ್ಳಾಲ ತಾಲೂಕಿನ ಸರಕಾರಿ ಕಂಬಳವಾಗಿ ಗುರುತಿಸಿಕೊಂಡಿರುವ ಎರಡನೇ ವರ್ಷದ ನರಿಂಗಾನ ಕಂಬಳೋತ್ಸವ ನರಿಂಗಾನ ಗ್ರಾಮದ ಮೋರ್ಲ ಬೋಳದ ಲವ-ಕುಶ ಜೋಡುಕರೆಯಲ್ಲಿ ಶನಿವಾರ ಉದ್ಘಾಟನೆಗೊಂಡಿತು.
ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರು ಕಂಬಳವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ತುಳುನಾಡಿನ ಕೃಷಿ ಪರಂಪರೆ ವಿಶಿಷ್ಟವಾದುದು. ತುಳುನಾಡಿನ ಕೃಷಿ ಹಾಗೂ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಕಂಬಳ ಈ ನಾಡಿನ ಹೆಮ್ಮೆಯ ಕಲೆಯಾಗಿ ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ. ಇಂತಹ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನರಿಂಗಾನದ ವಿಸ್ತಾರವಾದ ಜಾಗದಲ್ಲಿ ಸರ್ಕಾರಿ ಕಂಬಳ ನಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಕಂಬಳವು ನಮ್ಮ ಸಂಸ್ಕೃತಿಯ ಪ್ರತೀಕವಾಗಿ ಇನ್ನಷ್ಟು ಉತ್ತುಂಗಕ್ಕೇರಲಿ ಎಂದರು.
ಕಂಬಳ ಸಮಿತಿ ಅಧ್ಯಕ್ಷರು ಹಾಗೂ ವಿಧಾನಸಭೆ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಶುಭಹಾರೈಸಿದರು. ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಮಾತನಾಡಿ, ಕಂಬಳಕ್ಕೆ ದೇಶ ಮಾತ್ರ ಅಲ್ಲ ಇಂದು ವಿದೇಶದಲ್ಲೂ ಮನ್ನಣೆ ದೊರಕಿದೆ. ಯುವ ಸಮುದಾಯ ಇಂದು ಕಂಬಳದತ್ತ ಆಕರ್ಷಿತರಾಗಿ ಕೋಣಗಳನ್ನು ಸಾಕುತ್ತಿದ್ದಾರೆ. ಕಂಬಳಕ್ಕೆ ಪ್ರವಾಸೋದ್ಯಮ ಇಲಾಖೆಯ ನೇತೃತ್ವದಲ್ಲಿ ಸರ್ಕಾರ ವತಿಯಿಂದ ಐದು ಲಕ್ಷ ರೂ ಮಂಜೂರಾಗಲಿದೆ. ಕೋಣ ಸಾಕುವವರಿಗೆ, ಓಡಿಸುವವರಿಗೆ ಸರ್ಕಾರ ಗುರುತಿಸಬೇಕೆನ್ನುವ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಇದಕ್ಕೂ ಸರ್ಕಾರ ಪ್ರೋತ್ಸಾಹ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ವೆಂಕಪ್ಪ ಕಾಜವ ಮಿತ್ತಕೋಡಿ, ಮುಖಂಡರಾದ ಗುಣಪಾಲ್ ಕಡಂಬ, ಧಾರ್ಮಿಕ ಕ್ಷೇತ್ರದ ಮುಂದಾಳುಗಳಾದ ಪ್ರಮೋದ್ ರೈ, ಗುಣಕರ ಆಳ್ವ, ಕುರ್ನಾಡು ಗುತ್ತುವಿನ ಸುಧಾಕರ ಶೆಟ್ಟಿ, ಅರ್ಚಕರಾದ ರಾಘವೇಂದ್ರ ಆಚಾರ್, ಕಿನ್ಯ ಗುತ್ತು ನಾರಾಯಣ ಶೆಟ್ಟಿ, ವಾಸುಮೂಲ್ಯ ಪಣೋಲಿಬೈಲು, ಮುಖಂಡರಾದ ನವನೀತ್ ಶೆಟ್ಟಿ ಕದ್ರಿ, ನೀಲಾಕ್ಷ ಕರ್ಕೇರ, ಪ್ರಸಾದ್ ರೈ ಕಲ್ಲಿಮಾರ್, ರಾಜೇಶ್ ಶೆಟ್ಟಿ ಮುಂಬಾಯಿ, ಮನಮೋಹನ ಕೊಂಡೆ ಮೊದಲಾದವರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಮಾಜಸೇವಕರೂ ಆಗಿರುವ ಪದ್ಮನಾಭ ನರಿಂಗಾನ, ರವೀಂದ್ರ ಶೆಟ್ಟಿ ಮುನಿಯಾಲು ಅವರನ್ನು ಗೌರವಿಸಲಾಯಿತು.
ಕಂಬಳ ಸಮಿತಿ ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಪುಂಡಿಕಾಯಿ, ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.