ಬಂಟ್ವಾಳ, ಜ 13 (DaijiworldNews/MS):ಹೆಂಡತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪತಿ, ಆಕೆಗೆ ಹಲ್ಲೆ ನಡೆಸಿ 33 ಪವನ್ ಚಿನ್ನ ದೋಚಿದ ಪ್ರಕರಣ ಕಳೆದ ಡಿ. 30ರಂದು ನಡೆದಿದ್ದು, ಪ್ರಸ್ತುತ ಆಕೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಆಕೆಯ ಪತಿ ಹಾಗೂ 6 ಮಂದಿ ಆತನ ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ಕುರಿತು ಪುದು ಗ್ರಾಮ ನಿವಾಸಿ ಬಿ.ಬಿ.ಫಾತಿಮಾ ಪೊಲೀಸರಿಗೆ ದೂರು ನೀಡಿದ್ದು, ಆಕೆಯ ಪತಿ ಉಮ್ಮರ್ ಫಾರೂಕ್, ಆತನ ಸಹೋದರರಾದ ಮುಸ್ತಾಫಾ, ರಿಯಾಜ್, ಮೊಹಮ್ಮದ್, ಸಂಬಂಧಿಕರಾದ ದುಲೇಕಾ, ಆಸ್ಮಾ, ಅರ್ಷಿದಾ ಆರೋಪಿಗಳಾಗಿದ್ದಾರೆ.
ಫಾತಿಮಾ ನೀಡಿದ ದೂರಿನಲ್ಲಿ ವಿವರಿಸಿದಂತೆ, ಸುಮಾರು 14 ವರ್ಷಗಳ ಹಿಂದೆ ಆಕೆಗೆ ಉಮ್ಮರ್ ಫಾರೂಕ್ ಜತೆ ವಿವಾಹವಾಗಿದ್ದು, ಈ ವೇಳೆ 5 ಲಕ್ಷ ರೂ. ಹಾಗೂ 63 ಪವನ್ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಿದ್ದರು. ಬಳಿಕ ಆರೋಪಿ ಪತಿ ಹೆಚ್ಚಿನ ಹಣ ತರುವಂತೆ ಪತ್ನಿಗೆ ಕಿರುಕುಳದ ಜತೆಗೆ ಹಲ್ಲೆಯನ್ನೂ ಮಾಡುತ್ತಿದ್ದನು. ಆತನ ಸಹೋದರರು, ಅವರ ಪತ್ನಿಯರು ಕೂಡ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಫಾತಿಮಾ ನಂದಾವರದಲ್ಲಿ ಫ್ಲಾಟ್ ಖರೀದಿಸಿ ವಾಸವಾಗಿದ್ದರು. ಆರೋಪಿ ಪತಿಯು ಡಿ. 30ರಂದು ಆಕೆಯ ಫ್ಲಾಟ್ಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ರಕ್ತ ಬರುವಂತೆ ಹೊಡೆದು ನೀನು ಬೇಡ, ಬೇರೆ ಮದುವೆಯಾಗುವುದಾಗಿ ಹೇಳಿ ಹೋಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.